ಕೊಪ್ಪಳ, 09 ಜುಲೈ (ಹಿ.ಸ.) :
ಆ್ಯಂಕರ್ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ ಮೂಲಕ ಪ್ರಚಾರ ಮಾಡಲು ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸುರೇಶ ಜಿ. ಅವರು ತಿಳಿಸಿದ್ದಾರೆ.
ಬೀದಿನಾಟಕ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲೆಯಿಂದ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸುವ ತಂಡಗಳು ನೋಂದಾಯಿತ ಸಂಸ್ಥೆಯಾಗಿದ್ದು, ನಿಯಮಾನುಸಾರ ಚಾಲ್ತಿಯಲ್ಲಿರಬೇಕು.
ಪ್ರತಿ ಬೀದಿ ನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಮತ್ತು ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರನ್ನೊಳಗೊಂಡಿರಬೇಕು. ಪ್ರತಿ ಜಾನಪದ ಸಂಗೀತ ಕಲಾ ತಂಡದಲ್ಲಿ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರು ಇರುವುದು ಕಡ್ಡಾಯವಾಗಿದೆ.
ಕಲಾ ತಂಡಗಳ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, 2025 ರ ಆಗಸ್ಟ್ 12 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಲಾತಂಡಗಳನ್ನು 10 ಅಂಕ ಅನುಭವ, 10 ಅಂಕ ಕಲೆಯ ಅಭಿವ್ಯಕ್ತಿಗೆ, ಸಂಗೀತಕ್ಕೆ 10 ಅಂಕಗಳು ಮತ್ತು ಸೃಜನಶೀಲತೆ ಹಾಗೂ ಪ್ರಸ್ತುತಪಡಿಸುವಿಕೆಗೆ 10 ಅಂಕಗಳನ್ನು ನೀಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಜಿಲ್ಲೆಯ ಅರ್ಹ ಕಲಾ ತಂಡಗಳು ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ 2025 ರ ಆಗಸ್ಟ್ 1 ರೊಳಗಾಗಿ ಸಲ್ಲಿಸಬೇಕೆಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್