ಆನಂದ್, 09 ಜುಲೈ (ಹಿ.ಸ.) :
ಆ್ಯಂಕರ್ : ಗುಜರಾತಿನ ಆನಂದ್ ಜಿಲ್ಲೆಯ ಗಂಭೀರ್ ನದಿಯ ಮೇಲೆ ನಿರ್ಮಿತವಾದ ಹಳೆಯ ಸೇತುವೆ ಇಂದು ಬೆಳಿಗ್ಗೆ ಕುಸಿದ ಪರಿಣಾಮ, ನಾಲ್ಕು ವಾಹನಗಳು ನದಿಗೆ ಉರುಳಿ ಬಿದ್ದಿವೆ, ಈ ಭೀಕರ ಘಟನೆಯಲ್ಲಿ ೮ ಜನ ದುರ್ಮರಣ ಹೊಂದಿದ್ದು, ಮೂವರನ್ನು ಸ್ಥಳೀಯರ ಸಹಾಯದಿಂದ ಬದುಕುಳಿಸಲು ಸಾಧ್ಯವಾಗಿದೆ.
ಘಟನೆ ನಡೆದ ತಕ್ಷಣವೇ ಪದ್ರಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ಈಜುಗಾರರ ಸಕ್ರೀಯತೆ ಮತ್ತು ಹತ್ತಿರದ ಹಳ್ಳಿಗಳ ಜನರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಯಿತು.
ಗಂಭೀರ್ ಸೇತುವೆಯು 1981 ರಲ್ಲಿ ನಿರ್ಮಾಣ ಆರಂಭವಾಗಿ, 1985 ರಲ್ಲಿ ಸಾರ್ವಜನಿಕರಿಗೆ ತೆರೆಯಲ್ಪಟ್ಟಿತ್ತು. ಆದರೆ ಕಳೆದ ಹಲವಾರು ವರ್ಷಗಳಿಂದ ಇದು ಶಿಥಿಲ ಸ್ಥಿತಿಗೆ ತಲುಪಿದ್ದು, ಪೂರಕ ನಿರ್ವಹಣೆಯ ಕೊರತೆಯಿಂದ ಈ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ಈ ಸೇತುವೆಯು ಆತ್ಮಹತ್ಯಾ ತಾಣ ಎಂಬ ಕುಖ್ಯಾತಿ ಹೊಂದಿರುವುದಾಗಿ ಸ್ಥಳೀಯರು ಹೇಳಿದ್ದಾರೆ.
ಈ ಸೇತುವೆ ಕುಸಿದ ಪರಿಣಾಮ ಆನಂದ್-ವಡೋದರಾ ಹಾಗೂ ಭರೂಚ್-ಅಂಕಲೇಶ್ವರ ನಡುವಿನ ನೇರ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಹೆಚ್ಚಿನ ಅಪಾಯ ತಪ್ಪಿದರೂ, ಹಳೆಯ ಮೂಲಸೌಕರ್ಯದ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ತರಬಹುದು ಎಂಬ ಎಚ್ಚರಿಕೆಯನ್ನು ಈ ಘಟನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa