ಹುಬ್ಬಳ್ಳಿ, 06 ಜುಲೈ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ವಿಶಿಷ್ಟವಾದ ರುಚಿ ಹೊಂದಿರುವ ಬದನೆಕಾಯಿ ಎಣ್ಣಿಗಾಯಿ/ತುಂಬುಗಾಯಿ ಹೆಸರಾಂತ ಅಡುಗೆ. ಈ ಭಾರೀ ಖಾರದ, ಗಟ್ಟಿಯಾದ ಮಸಾಲೆ ಹೊಂದಿರುವ ತಯಾರಿ, ಜೋಳದ ರೊಟ್ಟಿ ಅಥವಾ ಬಿಸಿಯ ಅನ್ನದ ಜೊತೆ ಸೇವಿಸಿದರೆ ರುಚಿಯ ಅನುಭವ ನೀಡುತ್ತದೆ.
ಸಾಧಾರಣವಾಗಿ ಸಣ್ಣ ಗಾತ್ರದ ಬದನೆಕಾಯಿ ಗಳನ್ನು ನಾಲ್ಕು ಕಡೆಗಳಿಂದ ಸೀಳಲಾಗುತ್ತದೆ. ಅವುಗಳನ್ನು ನೀರಿನಲ್ಲಿ ಇಡುವುದರಿಂದ ಬದನೇಕಾಯಿ ಕಪ್ಪಾಗದಂತೆ ನೋಡಿಕೊಳ್ಳಲಾಗುತ್ತದೆ. ನಂತರ, ವಿಶೇಷವಾಗಿ ತಯಾರಾದ ಮಸಾಲೆಯನ್ನು ಬದನೇಕಾಯಿಯೊಳಗೆ ತುಂಬಲಾಗುತ್ತದೆ.
ಮಸಾಲೆ ತಯಾರಿ : ಒಣ ಕೊಬ್ಬರಿ ಪುಡಿ, ಎಳ್ಳಿನ ಪುಡಿ ಮತ್ತು ಶೇಂಗಾ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಧನಿಯಾ ಪುಡಿ, ಕುಟ್ಟಿದ ಗರಂ ಮಸಾಲೆ, ಅರಿಶಿಣ, ರುಬ್ಬಿದ ಶುಂಠಿ-ಬೆಳ್ಳುಳ್ಳಿ, ಈರುಳ್ಳಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಖಾರವನ್ನು ಸೇರಿಸಲಾಗುತ್ತದೆ. ಇದಕ್ಕೆ ನೆನೆಸಿದ ಹುಣಸೆಹಣ್ಣಿನ ರಸವನ್ನು ಸೇರಿಸಿ ಹದವಾದ ಮಸಾಲೆ ಪೇಸ್ಟ್ ತಯಾರಿಸಲಾಗುತ್ತದೆ.
ಅಡುಗೆ ವಿಧಾನ : ಒಂದು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಲಾಗುತ್ತದೆ. ನಂತರ ಮಸಾಲೆ ತುಂಬಿದ ಬದನೇಕಾಯಿಗಳನ್ನು ಎಣ್ಣೆಯಲ್ಲಿ ನಿಧಾನವಾಗಿ ಬಾಡಿಸಲಾಗುತ್ತದೆ. ಉಳಿದ ಮಸಾಲೆಗೆ ಸ್ವಲ್ಪ ನೀರು ಸೇರಿಸಿ ಅದನ್ನು ಕೂಡ ಸೇರಿಸಿ ಮಧ್ಯಮ ಉರಿಯಲ್ಲಿ ಒಂದು ಕುದಿಗೆ ತರುತ್ತಾರೆ.
ಈ ರುಚಿಕರ ಎಣ್ಣಿಗಾಯಿ ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪರಿಗಣಿಸಲಾಗಿದೆ. ಈ ತಿನಿಸು ಮುಖ್ಯವಾಗಿ ಜೋಳದ ರೊಟ್ಟಿ, ಅಥವಾ ಬಿಸಿಯ ಅನ್ನದೊಂದಿಗೆ ಸೇವಿಸುವ ಮೂಲಕ ದಿನಚರಿಯ ಭೋಜನಕ್ಕೆ ರುಚಿಯನ್ನು ನೀಡುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa