ನವದೆಹಲಿ, 31 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ 15ನೇ ಹಣಕಾಸು ಆಯೋಗದಡಿ ಒಟ್ಟು ₹6520 ಕೋಟಿ ವೆಚ್ಚಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 15ನೇ ಹಣಕಾಸು ಆಯೋಗದಡಿ (2021-22 ರಿಂದ 2025-26) ನಡೆಯುತ್ತಿರುವ ಕೇಂದ್ರ ವಲಯದ ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಗಾಗಿ ಹೆಚ್ಚುವರಿ ₹1920 ಕೋಟಿ ಸೇರಿದಂತೆ ಒಟ್ಟು ₹ 6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಯಿತೆಂದು ತಿಳಿಸಿದ್ದಾರೆ.
ಆಹಾರ ಘಟಕಗಳಿಗೆ ₹1000 ಕೋಟಿ:
ಕಿಸಾನ್ ಸಂಪದ ಯೋಜನೆ ಮೂಲಕ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಆಹಾರ ಮೌಲ್ಯವರ್ಧನ ಮೂಲಸೌಕರ್ಯ ಮತ್ತು 100 ಆಹಾರ ಪರೀಕ್ಷಾ ಪ್ರಯೋಗಾಲಯಗಳು ಹಾಗೂ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು ₹1000 ಕೋಟಿ ವೆಚ್ಚಕ್ಕೆ ಕೇಂದ್ರ ಅನುಮೋದನೆ ನೀಡಿದೆ.
ಆಹಾರ ಮೌಲ್ಯವರ್ಧನ ಮೂಲಸೌಕರ್ಯ ಮತ್ತು ಎಫ್ಎಸ್ ಕ್ಯೂಎಐ ಇವೆರೆಡೂ ಪಿಎಂಕೆಎಸ್ವೈ ಬೇಡಿಕೆ ಆಧಾರಿತ ಘಟಕ ಯೋಜನೆಗಳಾಗಿವೆ. ಹಾಗಾಗಿ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಂಪದ ಮೂಲಕ ವಿವಿಧ ಯೋಜನೆ ಮಂಜೂರಾತಿಗೆ ₹920 ಕೋಟಿ ಒದಗಿಸಿದೆ. ಪ್ರಸ್ತಾವಿತ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗುವುದು. ಇದರಿಂದ ವರ್ಷಕ್ಕೆ 20ರಿಂದ 30 ಲಕ್ಷ ಮೆಟ್ರಿಕ್ ಟನ್ ಆಹಾರ ಸಂರಕ್ಷಣಾ ಸಾಮರ್ಥ್ಯದ ನಿರೀಕ್ಷೆಯಿದೆ ಎಂದಿದ್ದಾರೆ.
ಖಾಸಗಿ ವಲಯದಡಿ ಪ್ರಸ್ತಾವಿತ 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಯಿಂದ ಆಹಾರ ಮಾದರಿ ಪರೀಕ್ಷೆ ಸುಲಲಿತವಾಗಲಿದೆ. ಅಲ್ಲದೇ, ಸುಧಾರಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದರಿಂದಾಗಿ ಆಹಾರ ಸುರಕ್ಷತೆ ಹಾಗೂ ಸುರಕ್ಷಿತ ಆಹಾರಗಳ ಪೂರೈಕೆಗೆ ಹೆಚ್ಚು ಹೆಚ್ಚು ನೆರವಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa