ಹೊಸಪೇಟೆ , 31 ಜುಲೈ (ಹಿ.ಸ.) :
ಆ್ಯಂಕರ್ : ಅಖಂಡ ಬಳ್ಳಾರಿ ಜಿಲ್ಲೆ ಹೊಸಪೇಟೆ ವ್ಯಾಪ್ತಿಯ ಸುಕ್ಷೇತ್ರ ಇಪ್ಪಿತ್ತೇರಿ ಅಜ್ಜಯ್ಯನ ಮಠದಲ್ಲಿ ಆ.10 ಮತ್ತು 11 ರಂದು ಶ್ರೀ ಕರಿಬಸವೇಶ್ವರಸ್ವಾಮಿಯ 17ನೇ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಕುರಿತು ಶ್ರೀಮಠದ ಮಾತಾ ಅನುರಾಧೇಶ್ವರಿ ಅವರು ಪ್ರಕಟಣೆ ನೀಡಿದ್ದು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಬೋಧಿಸಿದ ಉಜ್ಜಯಿನಿ ಸದ್ಧರ್ಮ ಸಿಂಹಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಕೃಪಾಶೀರ್ವಾದ ಹಾಗೂ ದಿವ್ಯಸಾನಿಧ್ಯದೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರವಿವಾರದಂದು ರಾತ್ರಿ 9-30 ರಿಂದ ಸಂಗೀತ ಮತ್ತು ಭಜನಾ ಕಾರ್ಯಕ್ರಮವನ್ನು ಇಪ್ಪಿತ್ತೇರಿಯ ಶ್ರೀ ಹುಲಿಗೆಮ್ಮ ದೇವಸ್ಥಾನ ಭಜನ ಮಂಡಳಿ, ನೀಲೋಗಲ್ ಬಸವೇಶ್ವರ ಭಜನ ಮಂಡಳಿ, ನಂ. 9 ಕಣಿವೆ ತಿಮ್ಮಲಾಪುರ ಇವರು ನಡೆಸಿಕೊಡಲಿದ್ದಾರೆ.
ಆ.11 ರಂದು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪ ಅಲಂಕಾರ ಜರುಗುವುದು. ಬೆಳಿಗ್ಗೆ 6 ಗಂಟೆಗೆ ಚಿತ್ತವಾಡಿಗಿಯ ಮಲ್ಲಿಕಾರ್ಜುನ ಗೌಡ ಇವರು ಗ್ರಾಮದೇವತೆ ಶ್ರೀ ನೀಲಮ್ಮ ಗುಡಿಯಿಂದ, ಅಜ್ಜಯ್ಯನ ಮಠಕ್ಕೆ ಶ್ರೀ ವೀರಗಾಸೆ, ಭದ್ರಕಾಳಿ, ನಂದಿಕೋಲು ಕಳಸದೊಂದಿಗೆ ಫಳಾರ ರಾಶಿ ತರುವುದು, 6-30 ಗಂಟೆಗೆ ಗಂಗೆ ಸ್ಥಳಕ್ಕೆ ಹೋಗುವುದು, ವೀರಗಾಸೆ, ಭದ್ರಕಾಳಿ, ನಂದಿಕೋಲು, ಸಮಾಳ ಮೇಳ, ಕುಂಭ-ಕಳಸ ಭಜನೆಗಳೊಂದಿಗೆ ಬಹು ವಿಜೃಂಭಣೆಯಿಂದ ಇಪ್ಪಿತ್ತೇರಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪಲಿದೆ. ನಂತರ ಧ್ವಜದ ಸವಾಲು ಆದಸ ಮೇಲೆ ಸದ್ಭಕ್ತರಿಂದ ಅಗ್ನಿಪ್ರವೇಶ, ಮಹಾಮಂಗಳಾರತಿ ನಂತರ ಮಹಾ ಪ್ರಸಾದ ಜರುಗಲಿದೆ.
ನಾಡಿನ ಹರ, ಗುರು, ಚರ ಮಠಾಧೀಶರು, ಧಾರ್ಮಿಕ ಗುರುಗಳು ಈ ಶ್ರಾವಣ ಮಾಸಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಜ್ಜಯ್ಯನ ಗದ್ದುಗೆ ದರ್ಶನ ಪಡೆದು, ಕೃತಾರ್ಥರಾಗುವಂತೆ ಮಾತಾ ಅನುರಾಧಾ ಅಮ್ಮನವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್