ರಾಯಚೂರು, 31 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ವಸತಿ ಶಾಲೆಗಳಿಗೆ ಜಲ ಜೀವನ್ ಮೀಷನ್ (ಜೆಜೆಎಂ) ಯೋಜನೆಯಡಿ ನಳದ ಸಂಪರ್ಕ ಕಲ್ಪಿಸಿ, ನೀರು ಪೂರೈಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿ.ಪಂ ಸಭಾಂಗಣದಲ್ಲಿ ಜುಲೈ 31ರಂದು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿ, ಜಿಲ್ಲೆಯ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ವಸತಿ ಶಾಲೆಗಳಲ್ಲಿನ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಪ್ರಥಮ ಆದ್ಯತೆ ನೀಡಬೇಕು. ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಇಇ ಅವರ ಗಮನಕ್ಕೆ ತಂದು ಶಾಲೆಗಳಿಗೆ ಬೇಕಾದ ಸೌಕರ್ಯ ಪಡೆದುಕೊಳ್ಳಬೇಕು. ಜಿಲ್ಲೆಯಾದ್ಯಂತ ನೀರಿನ ಸೌಲಭ್ಯ, ಶೌಚಾಲಯ ಸೇರಿದಂತೆ ಇನ್ನೀತರ ಸೌಕರ್ಯಗಳು ಇಲ್ಲದೆ ಇರುವ ಬಗ್ಗೆ ತುರ್ತಾಗಿ ಸಂಜೆಯೊಳಗೆ ವರದಿ ನೀಡಬೇಕೆಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯ ಸಾಧಿಸಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ಪರಿಶೀಲಿಸಿ, ಹೊಸ ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಬೇಕು. ಅದೇ ರೀತಿ ಶಿಥಿಲಾವಸ್ಥೆಗೆ ತಲುಪಿರುವ ಅಡುಗೆ ಕೋಣೆಗಳನ್ನು ಗುರುತಿಸಿ, ಮನರೇಗಾ ಅಥವಾ ಬೇರೆ ಅನುದಾನದಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಯಾವುದೇ ರೀತಿಯ ಅನಾಹುತ ಆಗುವ ಮೊದಲು ಮುನ್ನಚ್ಚೆರಿಕೆ ವಹಿಸಬೇಕು ಎಂದು ಸಿಇಓ ಅವರು ಸೂಚನೆ ನೀಡಿದರು.
ಮನರೇಗಾ ಅಥವಾ ಒಗ್ಗೂಡಿಸುವಿಕೆ ಯೋಜನೆಯಡಿ ಕೈಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು 3-4 ತಿಂಗಳೊಳಗೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ 750 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಜಾಗ ಲಭ್ಯ ಇರುವ ಕಡೆ ಶಾಶ್ವತ ಕಟ್ಟಡ ಒದಗಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ 227 ಅಂಗನವಾಡಿ ಕಟ್ಟಡಗಳು ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಾಗ ಲಭ್ಯ ಇರುವುದರಿಂದ ತ್ವರಿತವಾಗಿ ಸರ್ಕಾರಿ ಜಾಗ ಗುರುತಿಸಿ ಮನರೇಗಾ ಅಥವಾ ಒಗ್ಗೂಡಿಸುವಿಕೆಯಡಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದರು.
ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬಾಲ್ಯ ವಿವಾಹ/ ಬಾಲ ಕಾರ್ಮಿಕ ಪದ್ಧತಿ ಸಾಮಾಜಿಕ ಪೀಡುಗು ಆಗಿದ್ದು, ಇದರ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿವೆ.
116 ಬಾಲ್ಯ ವಿವಾಹಗಳ ತಡೆದ, 90 ಫೋಕ್ಸೋ ಪ್ರಕರಣಗಳನ್ನು ದಾಖಲಿಸಿದ ಬಗ್ಗೆ ಮಾಹಿತಿ ಇದೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದರು. ಮೊದಲನೇ ಮತ್ತು ಮೂರನೇ ಶನಿವಾರ ಸ್ವಚ್ಛತಾ ಶನಿವಾರ ಅಭಿಯಾನ ಕೈಗೊಂಡು, ಗ್ರಾಪಂ, ತಾಪಂ, ಜಿಪಂ ಕಚೇರಿಗಳನ್ನು ಸ್ವಚ್ಛಗೊಳಿಸಬೇಕೆಂದರು.
ಭೂ ವಿಜ್ಞಾನ ಇಲಾಖೆಯೊಂದಿಗೆ ಒಗ್ಗೂಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮರಳು ಬ್ಲಾಕಗಳನ್ನು ಗುರುತಿಸಿ, ಗ್ರಾಮ ಪಂಚಾಯತಿಯಿಂದ ರಾಯಲ್ಟಿ ಶುಲ್ಕ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದರು.
ಮನರೇಗಾ ಯೋಜನೆ: ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ವಾರ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ ಕೈಗೊಂಡು, ಪ್ರಕರಣಗಳ ತಿರುವಳಿ, ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ತಾಲೂಕುಗಳಲ್ಲಿ ಕಾಮಗಾರಿ ಮುಕ್ತಾಯ ದಿನಾಂಕ ನಮೂದಿಸಿ ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು.
ಸಹಾಯವಾಣಿ ಕೇಂದ್ರ ಪ್ರಾರಂಭ: ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಸಾರ್ವಜನಿಕ ಕುಂದುಕೊರತೆ ಘಟಕದ ಪೋಸ್ಟರನ್ನು ಇದೆ ವೇಳೆ ಸಿಇಓ ಅವರು ಬಿಡುಗಡೆಗೊಳಿಸಿದರು.
ಸಾರ್ವಜನಿಕರು ಸಹಾಯವಾಣಿ 08532-230539 ಸಂಖ್ಯೆಗೆ ಕರೆ ಮಾಡಬಹುದು. ನರೇಗಾ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಈ ಕುರಿತು ಮಾಹಿತಿ ನೀಡಬೇಕೆಂದು ಸಿಇಓ ಅವರು ಸೂಚನೆ ನೀಡಿದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಜಿಪಂ ಮುಖ್ಯ ಯೋಜನಾಧಿಕಾರಿಗಳಾದ ಟಿ. ರೋಣಿ, ಯೋಜನಾ ನಿರ್ದೇಶಕರಾದ ಶರಣಬಸವರಾಜ್, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಹಾಗೂ ವಿವಿಧ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ), (ಪಂ.ರಾ), ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜಿಪಂ ಸಿಬ್ಬಂದಿ ಸಭೆಯಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್