ಧಾರವಾಡ, 31 ಜುಲೈ (ಹಿ.ಸ.) :
ಆ್ಯಂಕರ್ : ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಸೈನಿಕರ ಮಕ್ಕಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಸೈನಿಕ ಕಲ್ಯಾಣ ನಿಧಿಯಿಂದ ಒಂದನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗೆ ಓದುವ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಪುಸ್ತಕ ಅನುದಾನವನ್ನು ಮತ್ತು ವಿಶೇಷ ನಿಧಿಯಿಂದ ಡಿಗ್ರಿ, ಡಪ್ಲೋಮಾ ಜೆಓಸಿ, ಪ್ರೋಪೇಷನಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಶಿಷ್ಯವೇತನವನ್ನು ಮಂಜೂರು ಮಾಡುವ ಸಲುವಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶುಲ್ಕ ರಹಿತ ಅರ್ಜಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಧಾರವಾಡ ಕಾರ್ಯಾಲಯದಿಂದ ಪಡೆದು, ಭರ್ತಿ ಮಾಡಿ, ನವೆಂಬರ್ 30, 2025 ರೊಳಗಾಗಿ ಸಲ್ಲಿಸಬೇಕು.
ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯ ಸಾಧಕರಿಗೆ ಪ್ರಶಸ್ತಿ: ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಮತ್ತು ವಿಜಯನಗರ ಜಿಲ್ಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ನಡೆದಂತಹ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಕರ್ನಾಟಕದ ಮೂಲನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ನಗದು ಪ್ರಶಸ್ತಿಯನ್ನು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಧಾರವಾಡ ಇವರಿಂದ ಪಡೆದು, ಭರ್ತಿ ಮಾಡಿ ನವೆಂಬರ 30, 2025 ರೊಳಗೆ ಸಲ್ಲಿಸಬೇಕು.
ಕರ್ನಾಟಕದ ಮೂಲನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ: ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 2025-26 ನೇ ಶೈಕ್ಷಣಿಕ ಸಾಲಿಗಾಗಿ ಒಂದನೇ ತರಗತಿಯಿಂದ ಅಂತಿಮ ಪದವಿ, ಡಿಪ್ಲೋಮಾ ಮತ್ತು ವೃತ್ತಿಪರ ಪದವಿಯವರೆಗೆ ಕರ್ನಾಟಕದಲ್ಲಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಇವರಿಂದ ಪಡೆದು, ಅಂಕಪಟ್ಟಿ, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 31, 2025 ಹಾಗೂ ವೃತ್ತಿಪರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ನವೆಂಬರ್ 30, 2025 ಎಂದು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa