ನಿಸಾರ್ ಉಪಗ್ರಹ ಇಂದು ಉಡಾವಣೆಗೆ ಸಜ್ಜು
ಇಸ್ರೋ–ನಾಸಾ ಜಂಟಿ ಯೋಜನೆ: 13,000 ಕೋಟಿ ರೂ ವೆಚ್ಚದ ವಿಶ್ವದ ಅತ್ಯಂತ ದುಬಾರಿ ಭೂವೀಕ್ಷಣಾ ಉಪಗ್ರಹ
Satlite


ಬೆಂಗಳೂರು, 30 ಜುಲೈ (ಹಿ.ಸ.) :

ಆ್ಯಂಕರ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮಹತ್ವಾಕಾಂಕ್ಷೆಯ ನಿಸಾರ್ ಉಪಗ್ರಹ ಇಂದು ಸಂಜೆ 5:40ಕ್ಕೆ ಇಸ್ರೋದ GSLV-F16 ರಾಕೆಟ್ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ. ಇದು ಭಾರತದಿಂದ ಉಡಾವಣೆಯಾಗುತ್ತಿರುವ 102ನೇ ಉಪಗ್ರಹವಾಗಿದೆ.

ಈ ಉಪಗ್ರಹ ಮುಖ್ಯವಾಗಿ ಹವಾಮಾನ ಬದಲಾವಣೆ, ಹಿಮಪಟಗಳ ನಿರೀಕ್ಷಣೆ, ಪ್ರವಾಹ, ಭೂಮಿಯ ತೇವಾಂಶ, ಅರಣ್ಯ ನಾಶ, ಕೃಷಿ ಬೆಳೆಗಳ ಆರೋಗ್ಯ, ನಗರೀಕರಣ ಮತ್ತು ಸೌಕರ್ಯ ಬದಲಾವಣೆ ಮುಂತಾದ ವಿಷಯಗಳ ಕುರಿತು ನಿಖರ ಮಾಹಿತಿ ನೀಡಲಿದೆ.

ಇದು ಒಟ್ಟು 13,000 ಕೋಟಿ ವೆಚ್ಚದ ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿದ್ದು 12 ಮೀಟರ್ ವ್ಯಾಸದ ಬೃಹತ್ ಆ್ಯಂಟೆನಾ, ಬಾಹ್ಯಾಕಾಶಕ್ಕೆ ಹೋದ ಅತಿದೊಡ್ಡ ಪ್ರತಿಫಲಕ, 242 ಕಿಮೀ ವ್ಯಾಪ್ತಿ ವೀಕ್ಷಣಾ ಸಾಮರ್ಥ್ಯ ಹೊಂದಿದ್ದು, ಪ್ರತಿ 97 ನಿಮಿಷಕ್ಕೆ ಭೂಮಿ ಸುತ್ತಲಿದ್ದು 12 ದಿನದಲ್ಲಿ ಇಡೀ ಭೂಮಿಯ ಸರ್ವೆ ಮಾಡಲಿದೆ. ಈ ಉಪಗ್ರಹದ ಸಂಪೂರ್ಣ ದತ್ತಾಂಶ ಎಲ್ಲ ದೇಶಗಳಿಗೆ ಉಚಿತವಾಗಿ ಲಭ್ಯವಾಗಲಿದೆ.

ಉಡಾವಣೆಯ ನಂತರ 90 ದಿನಗಳ ಕಾಲ ‘ಕಮಿಷನಿಂಗ್ ಹಂತ’ ನಡೆಯಲಿದೆ. ಈ ಅವಧಿಯಲ್ಲಿ ಉಪಗ್ರಹದ ಎಲ್ಲಾ ಘಟಕಗಳನ್ನು ತಪಾಸಣೆ ಮಾಡಲಾಗುತ್ತದೆ. ನಿಸಾರ್ ತನ್ನ ಪೂರ್ಣ ವೈಜ್ಞಾನಿಕ ಕಾರ್ಯಾಚರಣೆ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಆರಂಭಿಸಲಿದೆ.

ಇದು ಭಾರತ–ಅಮೆರಿಕ ಬಾಹ್ಯಾಕಾಶ ಸಹಕಾರದ ಹೊಸ ಅಧ್ಯಾಯವನ್ನೇ ಆರಂಭಿಸುತ್ತಿದ್ದು, ಭೂವಿಜ್ಞಾನ ಮತ್ತು ಪರಿಸರ ಸಂಶೋಧನೆಗೆ ಮಹತ್ವದ ಸಾಧನವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande