ಚಿಕ್ಕಮಗಳೂರು, 27 ಜುಲೈ (ಹಿ.ಸ.) :
ಆ್ಯಂಕರ್ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆರ್ಭಟಿಸುತ್ತಿದ್ದು, ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ, ಎನ್‌ಆರ್ ಪುರ ಭಾಗಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ತುಂಗಾ ನದಿ ಉಕ್ಕಿಹರಿಯುತ್ತಿದ್ದು, ಶೃಂಗೇರಿ ಶಾರದಾ ಮಠದ ಬಳಿ ಗಾಂಧಿ ಮೈದಾನ ಪಾರ್ಕಿಂಗ್ ಪ್ರದೇಶ ಜಲಾವೃತವಾಗಿದೆ. ಪ್ರವಾಸಿಗರ ಕಾರುಗಳು ನೀರಲ್ಲಿ ಮುಳುಗಿವೆ.
ಚಂದ್ರದ್ರೋಣ ಪರ್ವತದ ಬಳಿ ಬೃಹತ್ ಮರ ಉರುಳಿದ ಪರಿಣಾಮ ಮುಳ್ಳಯ್ಯನ ಗಿರಿ ಮತ್ತು ಬಾಬಾ ಬುಡನ್ ಗಿರಿ ದರ್ಗಾ ರಸ್ತೆಗಳು ಬಂದ್ ಆಗಿವೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲೆ ಮರ ಬಿದ್ದು ಭಾರಿ ಹಾನಿ ಸಂಭವಿಸಿದೆ. ಜಿಲ್ಲೆಗೆ ಮುಂದಿನ 3 ದಿನಗಳವರೆಗೆ ಭಾರೀ ಮಳೆ ಕುರಿತಾಗಿ ಕಿತ್ತಳೆ ಎಚ್ಚರಿಕೆ ಘೋಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa