ರಾಯಚೂರು, 22 ಜುಲೈ (ಹಿ.ಸ.) :
ಆ್ಯಂಕರ್ : ಚಿತ್ತರಗಿ ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮ ದಿನದ ಅಂಗವಾಗಿ ಆಗಸ್ಟ್ 1ರಂದು ಆಚರಿಸಲ್ಪಡುವ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸೂಚನೆ ನೀಡಿದ್ದಾರೆ.
ಜುಲೈ 22ರಂದು ನೂತನ ಜಿಲ್ಲಾಧಿಕಾರಿಗಳ ಆವರಣದಲ್ಲಿನ ತಮ್ಮ ಕಚೇರಿಯಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ವ್ಯಸನಮುಕ್ತ ದಿನಾಚರಣೆಯ ಜಿಲ್ಲಾ ಕೇಂದ್ರದ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳು ಮತ್ತು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜನೆ ಮಾಡಬೇಕು. ವಿದ್ಯಾರ್ಥಿ ಯುವಜನರಿಗೆ ವಿಶೇಷ ಸಂದೇಶ ಹೋಗುವ ರೀತಿಯಲ್ಲಿ ಅರ್ಥಪೂರ್ಣವಾಗಿ ದಿನಾಚರಣೆ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಗಸ್ಟ್ 1ರಂದು ವ್ಯಸನಮುಕ್ತ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಅಗತ್ಯ ಕ್ರಮ ವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಗಸ್ಟ್ 1ರಂದು ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ, ಪ್ರತಿಜ್ಞಾವಿಧಿ ಬೋಧನೆ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕು. ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ವಿಷಯದ ಮೇಲೆ ಶಾಲೆಯೊಂದರ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಅರಿವು ಮೂಡಿಸಬೇಕು ಎಂದು ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಜವಾಬ್ದಾರಿ ಹಂಚಿಕೆ ಮಾಡಿದರು. ವ್ಯಸನಮುಕ್ತ ದಿನಾಚರಣೆ ಹಿನ್ನೆಲೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಕವಿಗಳು, ಸಾಹಿತಿಗಳು, ಚಿಂತಕರಿಂದ ಲೇಖನ, ಕವಿತೆ, ಚುಟುಕು ಆಹ್ವಾನಿಸಿ ಅವುಗಳನ್ನು ದಿನಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರರರಿಗೆ ಸೂಚನೆ: ವ್ಯಸನ ಮುಕ್ತ ದಿನಾಚರಣೆಯನ್ನು ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಸೀಲ್ದಾರಗಳ ನೇತೃತ್ವದಲ್ಲಿ ಆಯೋಜನೆ ಮಾಡಬೇಕು. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಚರಣೆ ಮಾಡಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು ಎಂದು ರಾಯಚೂರ ಜಿಲ್ಲೆಯ ಸಿಂಧನೂರ, ಮಸ್ಕಿ, ಮಾನ್ವಿ, ಲಿಂಗಸಗೂರು, ಸಿರವಾರ, ದೇವದುರ್ಗ ಮತ್ತು ರಾಯಚೂರಿನ ತಹಸೀಲ್ದಾರಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಆಗಸ್ಟ್ 1ರಂದು ಆಚರಿಸಲ್ಪಡುವ ವ್ಯಸನ ಮುಕ್ತ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಸಮಿತಿ ರಚಿಸಲಾಗಿದೆ. ದಿನಾಚರಣೆಗಾಗಿ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಕಾರ, ಸಮನ್ವಯ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಯಚೂರು ತಹಶೀಲ್ದಾರರಾದ ಸುರೇಶ ವರ್ಮಾ, ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧಿಕಾರಿ ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಪ್ಪ ಉಪ್ರಾಳ, ಜಿಲ್ಲಾ ಪೊಲೀಸ್ ಇಲಾಖೆಯ ತಿಮ್ಮಣ್ಣ ಚಾಮನೂರ, ವಾರ್ತಾ ಇಲಾಖೆಯ ಅಪ್ರೆಂಟಿಸ್ ತರಬೇತುದಾರರಾದ ನವೀನ್, ಲವ ಹಾಗೂ ಇನ್ನೀತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್