ಬೆಂಗಳೂರು, 22 ಜುಲೈ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳದಲ್ಲಿ ಶವ ವಿಲೇವಾರಿ ಸಂಬಂಧಿಸಿದ ಅಸಹಜ ಸಾವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಿಯೋಜನೆಯಾಗಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಸಚಿವರು, “ಧರ್ಮಸ್ಥಳದಲ್ಲಿ ನಡೆದಿರುವ ಘಟನೆ ಗಂಭೀರವಾದದ್ದು. ಈ ಸಂಬಂಧ ಎಸ್‌ಐಟಿ ತಂಡವನ್ನು ರಚಿಸಿ ತನಿಖೆಗೆ ಸೂಚಿಸಲಾಗಿದೆ. ಧರ್ಮಸ್ಥಳ ಪೊಲೀಸರು ಸಹ ಸಹಕಾರ ನೀಡಬೇಕು ಎಂಬ ಸೂಚನೆಯನ್ನು ಈಗಾಗಲೇ ನೀಡಿದ್ದೇವೆ. ಯಾವುದೇ ಅಧಿಕಾರಿಯು ತನಿಖೆಯಿಂದ ಹಿಂದೆ ಸರಿಯಬಾರದು. ಅಂಥ ನಿರ್ಧಾರವಿದ್ದರೆ ನಮಗೆ ತಿಳಿಸಲಿ, ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದರು.
ಬಿಜೆಪಿ ನಾಯಕರು ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸಿರುವುದನ್ನು ಗೃಹ ಸಚಿವರು ತೀವ್ರವಾಗಿ ಟೀಕಿಸಿದರು. “ಇದಕ್ಕೆ ಈಗಿನಿಂದಲೇ ರಾಜಕೀಯ ಬಣ್ಣ ನೀಡಲು ಯತ್ನಿಸಲಾಗುತ್ತಿದೆ. ಎಸ್‌ಐಟಿ ತನಿಖೆಗೆ ಬಿಜೆಪಿಯ ವಿರೋಧಾತ್ಮಕ ನಿಲುವಿಗೆ ಯಾವುದೇ ತಾರ್ಕಿಕತೆ ಇಲ್ಲ,” ಎಂದು ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa