ಬಳ್ಳಾರಿ, 21 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸೌಲಭ್ಯಗಳು, ಕೃಷಿ ಹಾಗೂ ಇತರೆ ಇಲಾಖೆಗಳ ಸಾಮಾಗ್ರಿ-ಸಲಕರಣೆಗಳು ಜನರಿಗೆ ವಿತರಿಸಲು ಜನರಿಗೆ-ರೈತರಿಗೆ ಯಾವ ಸೌಲಭ್ಯ ನೀಡಬೇಕು ಎನ್ನುವುದರ ಕುರಿತು ಆಯಾ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದ್ದಾರೆ.
ಕೋಟೆ ಪ್ರದೇಶದಲ್ಲಿರುವ ಬಳ್ಳಾರಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಬಳ್ಳಾರಿ ತಾಲ್ಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲಾಖೆಗಳ ಅಧಿಕಾರಿಗಳು ಜನರಿಗೆ ಯಾವ ಯಾವ ಸೌಲಭ್ಯ ನೀಡಬೇಕು ಅದನ್ನು ಗಮನಿಸಬೇಕು. ಸರ್ಕಾರದಲ್ಲಿ ಸಾಕಷ್ಟು ಅನುದಾನವಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡುವವರೆಗೆ ಅಧಿಕಾರಿಗಳು ಕಾಯುವುದು ಬೇಡ. ನಿಮ್ಮ ಇಲಾಖೆಗಳಿಗೆ ಏನು ಬೇಕು ಅದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದರು.
ಪ್ರಸ್ತಕ ಸಾಲಿನಲ್ಲಿ ಬಳ್ಳಾರಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 515 ಎಂ.ಎಂ ಮಳೆ ನಿರೀಕ್ಷೆ ಇದ್ದು, ಈವರೆಗೆ 165 ಎಂ.ಎಂ ಮಳೆಯಾಗಿದೆ. 138.4 ಎಂ.ಎಂ ಮಳೆ (ಶೇ.16 ರಷ್ಟು) ಕೊರತೆಯಾಗಿದೆ. ಬಳ್ಳಾರಿ ತಾಲ್ಲೂಕಿನಲ್ಲಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಸಹಾಯಕ ಅಧಿಕಾರಿಗಳು ಸಭೆಗೆ ತಿಳಿಸಿದರು.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಜೊತೆಗೂಡಿ ರೈತರಿಗೆ ಬೆಳೆ ವಿಮೆ ಮಾಡಿಸುವ ಜಾಗೃತಿ ಮೂಡಿಸಬೇಕು. ಈವರೆಗೆ ಶೇ.01 ರಷ್ಟು ಸಹ ರೈತರು ಬೆಳೆ ವಿಮೆಗೆ ನೋಂದಾಯಿಸಿಲ್ಲ. ಬೆಳೆ ಹಾನಿಯಾದಾಗ ವಿಮೆಯು ರೈತರನ್ನು ಕೈ ಹಿಡಿಯುತ್ತದೆ ಎಂದರು.
ಜಿಲ್ಲೆಯಲ್ಲಿ ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದು, ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಮನವರಿಕೆ ಮಾಡಿ ತೋಟಗಾರಿಕೆ ಇಲಾಖೆಯಿಂದ ಉತ್ತೇಜನ ನೀಡಬೇಕು ಅಧಿಕಾರಿಗಳಿಗೆ ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸಲು ಅಧಿಕಾರಿಗಳು ಸಾಕಷ್ಟು ಶ್ರಮವಹಿಸಬೇಕಿದೆ. ಅಗತ್ಯಕ್ಕೆ ತಕ್ಕಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಿ, ನಮ್ಮ ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದರಲ್ಲದೇ, ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣಕ್ಕೆ ಪ್ರತ್ಯೇಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದರು.
ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಈ ಕುರಿತಾಗಿಯೇ ಸಾಕಷ್ಟು ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ವಿವಿಧ ಅನುದಾನದಡಿ ಜಿಲ್ಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬಳ್ಳಾರಿ ತಾಲ್ಲೂಕನ್ನು ಆಯ್ದುಕೊಳ್ಳಲಾಗುವುದು ಎಂದರು.
ಬಳ್ಳಾರಿ ತಾಲ್ಲೂಕು ವ್ಯಾಪ್ತಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ವಿವಿಧ ಬ್ಯಾಚ್‍ಗಳ ಕಾಮಗಾರಿಗಳನ್ನು ಗುಣಮಟ್ಟತೆಯಿಂದ ಪೂರ್ಣಗೊಳಿಸಬೇಕು. ಕೆರೆಗಳನ್ನು ಸ್ವಚ್ಛಗೊಳಿಸಬೇಕು. ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಇಲಾಖೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸಭೆಗೂ ಮುನ್ನ ಗ್ಯಾರಂಟಿ ಯೋಜನೆಯ ಯುವನಿಧಿ ಯ ಮೂರನೇ ವರ್ಷದ ನೋಂದಣಿ ಪ್ರಕ್ರಿಯೆ ಮಾಹಿತಿ ಕುರಿತ ಭಿತ್ತಿಚಿತ್ರ ಮತ್ತು ಡಿಎಪಿ ರಸಗೊಬ್ಬರ ಬಳಕೆ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವ ಕುರಿತ ಮಾಹಿತಿ ಭಿತ್ತಿಚಿತ್ರ ಗಣ್ಯರು ಅನಾವರಣಗೊಳಿಸಿದರು.
ಈ ವೇಳೆ ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ ಗೌಡ, ಬಳ್ಳಾರಿ ತಾಪಂ ಆಡಳಿತಾಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಬಳ್ಳಾರಿ ತಾಪಂ ಇಓ ಶ್ರೀಧರ್ ಐ ಬಾರಿಕಾರ ಸೇರಿದಂತೆ ತಾಲ್ಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್