ಗದಗ, 21 ಜುಲೈ (ಹಿ.ಸ.) :
ಆ್ಯಂಕರ್ : ಹೆಸ್ಕಾಂ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಹೆಸ್ಕಾಂ ವತಿಯಿಂದ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದ್ದು, ರಾತ್ರಿಯ ವೇಳೆಯಲ್ಲಿ ತೋಟಗಳಲ್ಲಿ ನೀರು ಪೊರೈಕೆ ಮಾಡುವದನ್ನು ತಪ್ಪಿಸಿ ಹಗಲು ಹೊತ್ತು 7 ಗಂಟೆ ನಿರಂತರ ವಿದ್ಯುತ ನೀಡುವ ನಿಟ್ಟಿನಲ್ಲಿ ಸರಕಾರ ಚಿಂತನೆ ಮಾಡಿದ್ದು ಶೀಘ್ರದಲ್ಲಿ ಅದು ಜಾರಿಯಾಗುತ್ತದೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೆಸ್ಕಾಂ ಆವರಣದಲ್ಲಿ ವಿದ್ಯುತ್ ಪರಿವರ್ತಕ ಸಾಗಿಸುವ ನೂತನ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
2023 ರಲ್ಲಿ ಹೊಸ ಟಿಸಿಗಾಗಿ ಹತ್ತು ಸಾವಿರ ರೂಪಾಯಿಗಳನ್ನು ಭರ್ತಿ ಮಾಡಿ ನೋಂದಣಿ ಮಾಡಿಸಿಕೊಂಡ 7 ಜಿಲ್ಲೆಗಳ 15200 ಜನ ರೈತರಿಗೆ ಟಿಸಿ ಪೂರೈಸಿದ್ದೇವೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.
200 ಕೋಟಿ ರೂಪಾಯಿ ವೆಚ್ಚದಲ್ಲಿ 50 ರೂಪಾಯಿ ತುಂಬಿ ಹೆಸರು ನೋಂದಾಯಿಸಿಕೊಂಡ 30 ಸಾವಿರ ರೈತರಿಗೆ ನೀರಾವರಿ ಸೌಲಭ್ಯಕ್ಕಾಗಿ (ಐಪಿ ಸೆಟ್)ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಗ್ರಿಡ್ ಪಕ್ಕದಲ್ಲಿಯೇ ಸೋಲಾರ್ ಪ್ಲಾಟ್ ಅನುಷ್ಠಾನ ಮಾಡಿ ಅಲ್ಲಿಂದ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯ ರೋಣ ತಾಲೂಕು ಮುಸಿಗೇರಿ ಹಾಗೂ ಚಿಕ್ಕಾಬಳ್ಳಾಪುರಗಳಲ್ಲಿ ಪ್ರಯೋಗಿಕವಾಗಿ ಈ ವ್ಯವಸ್ಥೆ ಮಾಡಿದ್ದು ಅದು ಯಶಸ್ವಿಯಾಗಿದೆ. ಇದನ್ನೇ ನಮ್ಮಲ್ಲ ಹೆಸ್ಕಾಂ ವಿಭಾಗದಲ್ಲಿ ಅಳವಡಿಸಲು ನಿರ್ಧರಿಸಿದ್ದೇವೆ ಎಂದರು.
ಈಗಾಗಲೇ ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯ ನಡೆದಿದೆ. ಆದರೆ ಮೀಟರ್ ದರ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮುಂದಿನ ಸಭೆಗೆ ಬಂದಾಗ ಈ ಕುರಿತು ವಿವರಣೆ ನೀಡುತ್ತೇನೆ ಎಂದ ಅವರು ವಿದ್ಯುತ್ ಪರಿಕರ ಸೇರಿದಂತೆ ಮತ್ತಿತರ ವಸ್ತುಗಳನ್ನು ಸಾಗಿಸಲು ವಾಹನಕ್ಕೆ ಚಾಲನೆ ನೀಡಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಕ್ಷ್ಮೇಶ್ವರ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮತ್ತು ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಪಿ.ಬಳಿಗಾರ ಮಾತನಾಡಿ ಪಂಚ ಗ್ಯಾರಂಟಿ ಮುಖ್ಯವಾದ ಉಚಿತ ವಿದ್ಯುತ್ ಪೂರೈಕೆ ಯೋಜನೆಯಡಿ ತಾಲ್ಲೂಕಿನಲ್ಲಿ ಶೇ.98 ರಷ್ಟು ಫಲಾನುಭವಿಗಳ ಯೋಜನೆಯ ಲಾಭ ಮುಟ್ಟಿಸಿದ್ದೇವೆ. ಇನ್ನೂ ಯೋಜನೆ ಲಾಭ ಪಡೆಯದವರನ್ನು ಭೇಟಿ ಮಾಡಿ ಇರುವ ಸಮಸ್ಯೆಯನ್ನು ಪರಿಹರಿಸಿ ಅವರಿಗೂ ಯೋಜನೆ ತಲುಪುವಂತೆ ಮಾಡುತ್ತೇವೆ ಎಂದರು ತಿಳಿಸಿದರು.
ಹೆಸ್ಕಾಂನ ಕಾರ್ಯಪಾಲಕ ಅಭಿಯಂತರ ರಾಜೇಶ ಕಲ್ಯಾಣಶೆಟ್ಟರ ಮಾತನಾಡಿ, ಲಕ್ಷ್ಮೇಶ್ವರ ಹೆಸ್ಕಾಂ ಕಚೇರಿ ಅತ್ಯಂತ ಹಳೆಯದಾಗಿದ್ದು ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ರಾಮಣ್ಣ ಲಮಾಣಿ (ಶಿಗ್ಲಿ), ಯಲ್ಲಪ್ಪ ತಳವಾರ, ರಮೇಶ ಬಾರಕಿ, ಸಾಯಿಬ್‌ಜಾನ್ ಹವಾಲ್ದಾರ, ಎಂ.ಎಂ.ಗದಗ, ಅಂಬರೀಶ ತೆಂಬದಮನಿ, ಹೆಸ್ಕಾಂ ಎಇಇ ಬಿ. ಆಂಜಿನಪ್ಪ, ಸೆಕ್ಷನ್ ಎಂಜಿನಿಯರ್ ಕಿರಣಕುಮಾರ ಪಮ್ಮಾರ, ಎಇ ಗುರುರಾಜ ಸಿ, ಮೇಲ್ಚಿಚಾರಕರಾದ ರಘುಪತಿ ನಾಯಕ, ಶಿಗ್ಲಿ ಶಾಖಾಧಿಕಾರಿ ಅಮರೇಶ ಹುಲಗೂರ, ಸಂತೋಷ ನಾಯಕ, ವಿಜಯಕುಮಾರ ಸೇರಿದಂತೆ ಮತ್ತಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / Lalita Manjunath Pattar