ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್:ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಚಿತ್ರದ ಶೂಟಿಂಗ್ ಇದೀಗ ಅಧಿಕೃತವಾಗಿ ಪೂರ್ಣಗೊಂಡಿದೆ. ಈ ಕುರಿತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು, ಚಿತ್ರದ ಭವ್ಯತೆಗೆ ಸಾಕ್ಷಿಯಾಗುತ್ತಿದೆ.
ಸಾವಿರಾರು ಸಿಬ್ಬಂದಿ ಹಾಗೂ ತಂತ್ರಜ್ಞರ ಶ್ರಮದ ಫಲವಾಗಿ ಈ ಚಿತ್ರಕ್ಕೆ ಬರೋಬ್ಬರಿ 250 ದಿನಗಳ ಚಿತ್ರೀಕರಣ ನಡೆದಿದೆ. ಮೂರು ವರ್ಷಗಳ ಕಾಲ ರಿಷಬ್ ಶೆಟ್ಟಿ ಹಾಗೂ ತಂಡ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಅಕ್ಟೋಬರ್ 2ರಂದು ಸಿನಿಮಾ ವಿಶ್ವದಾದ್ಯಾಂತ ಬಿಡುಗಡೆಗೊಳ್ಳಲಿದೆ.
‘ಕೆಜಿಎಫ್’, ‘ಸಲಾರ್’, ‘ಕಾಂತಾರ’ ಮೊದಲಾದ ಹಿಟ್‌ಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಭರ್ಜರಿ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ಚಿತ್ರದ ಹಿನ್ನೆಲೆ ಸಂಗೀತಕ್ಕೆ ಬಿ. ಅಜನೀಶ್ ಲೋಕನಾಥ್ ಅವರು ಮತ್ತೆ ಮಾಂತ್ರಿಕ ಸ್ಪರ್ಶ ನೀಡಲಿದ್ದಾರೆ. ಛಾಯಾಗ್ರಹಣಕ್ಕೆ ಅರವಿಂದ್ ಕಶ್ಯಪ್ ಮತ್ತು ಪ್ರೊಡಕ್ಷನ್ ಡಿಸೈನ್‌ಗೆ ವಿನೇಶ್ ಬಂಗ್ಲನ್ ಅವರು ತೊಡಗಿಸಿಕೊಂಡಿದ್ದಾರೆ.
ಚಿತ್ರವು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಭಾರತೀಯ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಂಡೇ ವಿಭಿನ್ನ ಪ್ರೇಕ್ಷಕರನ್ನು ತಲುಪಲಿದೆ. ಪಾತ್ರವರ್ಗದ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಮೇಕಿಂಗ್ ವಿಡಿಯೋ ಸಾಕಷ್ಟು ಕುತೂಹಲ ಹುಟ್ಟಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa