ಬಳ್ಳಾರಿ, 21 ಜುಲೈ (ಹಿ.ಸ.) :
ಆ್ಯಂಕರ್ : ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಕ್ತ ಸುರಕ್ಷತಾ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಏಡ್ಸ್ ನಿಯಂತ್ರಣ ಘಟಕ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್ ಮೂಲಕ ನಗರದ ಕೌಲ್ ಬಜಾರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ಉಚಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ರಕ್ತದಾನ ಮಾಡುವುದರಿಂದ ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರೀಯರಿಗೆ, ಶಸ್ತ್ರಚಿಕಿತ್ಸಾ ಹೆರಿಗೆ ವೇಳೆ ಮತ್ತು ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಕ್ಕಾಗಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಥ್ಯಾಲಿಸೀಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳ ಜೀವವನ್ನು ಉಳಿಸುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಲು ಮುಂದೆ ಬರಬೇಕು ಎಂದರು.
ಜಗತ್ತಿನಲ್ಲಿ ಅತಿ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದಾಗಿದೆ. ಇದರಿಂದ ಹಲವಾರು ಜನರ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಸಾವಿನಿಂದ ಪಾರು ಮಾಡಲು ಸಾಧ್ಯವಿದೆ, ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ವಿನಂತಿಸಿದರು.
ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ, ರಕ್ತವೇ ದೇಹದ ಜೀವನಾಡಿಯಾಗಿದ್ದು, ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲದೆ ಇರುವುದರಿಂದ ಇನ್ನೊಬ್ಬ ವ್ಯಕ್ತಿಯ ರಕ್ತದಾನದ ಮೂಲಕ ಮಾತ್ರ ಪಡೆಯಬಹುದಾಗಿದೆ ಎಂದರು.
18 ರಿಂದ 60 ವರ್ಷದ ಒಳಗಿನ ಎಲ್ಲಾ ಆರೋಗ್ಯವಂತ ಪುರುಷ ಮತ್ತ ಮಹಿಳೆಯರು ರಕ್ತದಾನ ಮಾಡಲು ಅವಕಾಶವಿದ್ದು, 45 ಕೆಜಿ ಮೇಲ್ಪಟ್ಟ ಹಾಗೂ 12.5 ಗ್ರಾಂ. ಗಿಂತ ಹೆಚ್ಚು ಹಿಮೋಗ್ಲೊಬಿನ್ ಇರುವ ಮಹಿಳೆಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ, ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ದಾನಿಗಳು ತಮ್ಮ ಆರೋಗ್ಯವನ್ನು ಸಹ ಉಲ್ಲಾಸಮಯವಾಗಿಸಿಟ್ಟುಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಶ್ರೀರಾಮ್ ರಾಜ್ ಫೌಂಡೇಶನ್ ವತಿಯಿಂದ ಪ್ರತಿ ರಕ್ತದಾನಿಗೂ ಉಚಿತ ಹೆಲ್ಮೆಟ್ ವಿತರಿಸಲಾಯಿತು. ನಂತರ ಕೌಲ್‍ಬಜಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ 105 ಜನರ ಅಂಗಾಂಗ ದಾನ ನೋಂದಣಿ ಮಾಡಿಸಲಾಯಿತು. ಶಿಬಿರದಲ್ಲಿ ಒಟ್ಟಾರೆ 270 ಜನರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಡಿ.ಸುಕುಂ, ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ, ಸಿಬ್ಬಂದಿಗಳಾದ ಸುನಿತ, ಅರುಣ್ ಹಾಗೂ ವಿವಿಧ ವೃಂದದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್