ಬಳ್ಳಾರಿ, 21 ಜುಲೈ (ಹಿ.ಸ.) :
ಆ್ಯಂಕರ್ : ಬಾಲ ಕಲಾವಿದರ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಸಿರುಗುಪ್ಪದ ಸಾಹಿತಿ ಹಾಗೂ ರಂಗ ನಿರ್ದೇಶಕ ಕುರುವಳ್ಳಿ ತಿಮ್ಮಯ್ಯ ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ವತಿಯಿಂದ ಸಿರುಗುಪ್ಪ ಪಟ್ಟಣದ ಶ್ರೀ ಯಲ್ಲಮ್ಮದೇವಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಚಿಗುರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾಡಿನ ಸಾಂಸ್ಕೃತಿಕ ಪಾರಂಪರಿಕ ಕಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಬಾಲ್ಯ ಕಲಾವಿದರು ತಮ್ಮೊಳಗಿನ ಕಲಾಶಕ್ತಿಯನ್ನು ಬಿಂಬಿಸಲು ವೇದಿಕೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿರುಗುಪ್ಪ ನಗರಸಭೆ ಅಧ್ಯಕ್ಷರಾದ ಬಿ.ರೇಣುಕಮ್ಮ ವೆಂಕಟೇಶ್ ಅವರು ನೆರೆವೇರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಶ್ರೀ ಯಲ್ಲಮ್ಮದೇವಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೈ.ಡಿ.ವೆಂಕಟೇಶ್, ನೃತ್ಯ ಕಲಾವಿದ ಅಭಿಷೇಕ್ ಸೇರಿದಂತೆ ಶಾಲಾ ಮಕ್ಕಳು ಹಾಗೂ ಇತರರು ಇದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳ್ಳಾರಿಯ ಕುಮಾರಿ ವೀರ ಪಂಚಾಕ್ಷರಿ ಇವರಿಂದ ಕೊಳಲು ವಾದನ, ಕು.ಗೌರಿ ಸೃಜನ ಇವರಿಂದ ಸುಗಮ ಸಂಗೀತ, ಸೂರ್ಯ ಕಲಾ ಟ್ರಸ್ಟ್ ಇವರಿಂದ ಸಮೂಹ ನೃತ್ಯ, ಕು.ಸನ್ನಿಧಿ ಜಿ.ಎಮ್ ಇವರಿಂದ ಜಾನಪದ ಗೀತೆಗಳು, ಸಿರುಗುಪ್ಪದ ಕುಮಾರಿ ಬಿ.ನವ್ಯ ಇವರಿಂದ ಏಕಪಾತ್ರಾಭಿನಯ (ತಾಯಿಯ ಮಮತೆ), ಕುಮಾರಿ ಜೆ.ಎಸ್.ಸಾಹಿತ್ಯ ಸಂಗಡಿಗರಿಂದ ಇವರಿಂದ ನಾಟಕ (ಮೊಬೈಲ್ ಲೋಕ) ಪ್ರದರ್ಶನ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್