ತುಮಕೂರು, 21 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕದಿಂದ ಪ್ರತಿ ವರ್ಷ 4.50 ಲಕ್ಷ ಕೋಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ತಲುಪುತ್ತಿದ್ದು, ಅದರಲ್ಲಿ ಕೇವಲ 65 ಸಾವಿರ ಕೋಟಿ ರೂ. ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ. ಇದನ್ನು ಯಾವುದೇ ಜೆಡಿಎಸ್ ಹಾಗೂ ಬಿಜೆಪಿ ಸಂಸದರು , ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಕಳೆದ ವಿಧಾನ ಸಭೆ ಚುನಾಣೆಯಲ್ಲಿ 136 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದ ಪರಿಣಾಮ, ಜೆಡಿಎಸ್ ನವರು ಬಿಜೆಪಿಯೊಂದಿಗೆ ಮೈತ್ರಿ ಹೊಂದಿ ಲೋಕಸಭಾ ಚುನಾವಣೆಯನ್ನು ಎದುರಿಸುವ ದುಸ್ಥಿತಿ ಬಂತು. ಜಿಡಿಎಸ್ ನವರ ಶಕ್ತಿ ಇಲ್ಲಿ ಕುಂದುತ್ತಿದೆ. 2004 ರಲ್ಲಿ ನಾನು ಜೆಡಿಎಸ್ ನಲ್ಲಿದ್ದಾಗ, ಜೆಡಿಎಸ್ ಪಕ್ಷ 59 ಸ್ಥಾನಗಳನ್ನು ಗೆದ್ದಿತ್ತು. ಹಿಂದಿನ ಚುನಾವಣೆಯಲ್ಲಿ ಅವರು ಕೇವಲ 18 ಸ್ಥಾನಗಳನ್ನು ಗೆದ್ದರು. ಪಾವಗಡ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ನವರ ಗ್ಯಾರಂಟಿ ಯೋಜನೆಗಳು , ಬಿಜೆಪಿ ಹಾಗೂ ಜೆಡಿಎಸ್ ನ್ನು ಕಂಗೆಡಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಿದ್ದ ಶಕ್ತಿ ಯೋಜನೆಯಲ್ಲಿ , ಇದುವರೆಗೆ ಸುಮಾರು 500 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ,1.64 ಕೋಟಿ ಕುಟುಂಬಗಳು ಲಾಭ ಪಡೆಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ನೀಡಿ, ರಾಜ್ಯ ಹಸಿವುಮುಕ್ತವಾಗಬೇಕೆನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
ಲೋಕ ಸಭಾ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದರು. ಅಪಪ್ರಚಾರ, ತಪ್ಪು ಮಾಹಿತಿಯನ್ನು ಜನರಿಗೆ ನೀಡಬಾರದು ಎಂದು ಈಗಾಗಲೇ ಬಹಿರಂಗ ಚರ್ಚೆಗೆ ಬರಲು ಆಹ್ವಾನ ನೀಡಿದ್ದೇನೆ ಎಂದರು.
ನಮ್ಮ ಸರ್ಕಾರ ಒಂದು ಧರ್ಮದ ಪರವಾಗಿ ಯೋಜನೆ ರೂಪಿಸಿಲ್ಲ, ಅಕ್ಕಿ, ಕರೆಂಟ್, ಶಕ್ತಿ, ಯೋಜನೆಯನ್ನು ಬಿಜೆಪಿಯ ಬಡವರಿಗೂ ನೀಡಲಾಗಿದೆ. ಒಂದು ಪಕ್ಷಕ್ಕೆ, ಒಂದು ಜಾತಿ, ಧರ್ಮಕ್ಕೆ ನೀಡಿಲ್ಲ. ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಹಿಂದುಳಿದ ತಾಲ್ಲೂಕುಗಳು ಮುಂದುವರೆಯಲು ಈ ಎಲ್ಲಾ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ. ಕರ್ನಾಟಕದ 240 ತಾಲ್ಲೂಕು, 224 ವಿಧಾನಸಭಾ ಕ್ಷೇತ್ರಗಳಿಗೆ ಎಲ್ಲಾ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa