ರಾಯಚೂರು, 02 ಜುಲೈ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ ಅವರಿಗೆ ಸರಕಾರದಿಂದ ಪ್ರಶಂಸನಾ ಪತ್ರ ಲಭಿಸಿದೆ.
ಕಳೆದ ಮೇ 14ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರಾಯಚೂರ ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಾದ ಮಣ್ಣಿನ ಫಲವತ್ತತೆಯ ರಾಷ್ಟ್ರೀಯ ಯೋಜನೆ (ಎಸ್‍ಎಚ್ಸಿ) ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‍ಕೆವಿವೈ), ಮನರೇಗಾ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹೀಗೆ ನಾನಾ ಯೋಜನೆಗಳ ಅನುಷ್ಠಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದನ್ನು ಮುಖ್ಯಮಂತ್ರಿಗಳು ಗಮನಿಸಿ, ಸಂಬಂಧಿಸಿದ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲು ತಿಳಿಸಿದ್ದಾರೆ.
ಈ ಉತ್ತಮ ಪ್ರಗತಿಯನ್ನು ಸಾಧಿಸಲು ಇಲಾಖಾಧಿಕಾರಿಗಳು ಹಾಗೂ ಇಲಾಖೆಯ ಎಲ್ಲ ಸಿಬ್ಬಂದಿಯ ಅಚಲ ಬದ್ಧತೆ, ನಿರಂತರ ಶ್ರಮ ಹಾಗೂ ಸಮನ್ವಯದ ಕಾರ್ಯಪದ್ಧತಿಯೇ ಕಾರಣ. ನಿಮ್ಮ ತಂಡದ ಈ ಉತ್ಸಾಹ ಹಾಗೂ ಕಠಿಣ ಪರಿಶ್ರಮವೇ ಇಂತಹ ಯಶಸ್ಸಿಗೆ ನಾಂದಿಯಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಜಿಪಂ ಸಿಇಓ ರಾಹುಲ್ ಪಾಂಡ್ವೆ ಅವರಿಗೆ ನೀಡಿದ ಪ್ರಶಂಸನಾ ಪತ್ರದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್