ಬಳ್ಳಾರಿ, 02 ಜುಲೈ (ಹಿ.ಸ.) :
ಆ್ಯಂಕರ್ : ವಚನ ಸಾಹಿತ್ಯಕ್ಕೆ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ನೀಡಿದ ಅಮೋಘ ಕೊಡುಗೆಯ ಕಾರಣಕ್ಕಾಗಿ ಅವರನ್ನು ‘ವಚನ ಪಿತಾಮಹ' ಎಂದು ಕರೆಯಲಾಗುತ್ತದೆ ಎಂದು ರಾವ್‍ಬಹುದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಎ. ತಿಮ್ಮನಗೌಡ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕøತಿಕ ಸಮುಚ್ಚಯದ ಹೊಂಗಿರಣದಲ್ಲಿ ಬುಧವಾರ ನಡೆದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ನಡೆದ `ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ'ಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
1880 ಜುಲೈ 2 ರಂದು ಜನಿಸಿದ ಡಾ.ಫ.ಗು.ಹಳಕಟ್ಟಿ ಅವರು ಧಾರವಾಡದ ಗುರುಬಸಪ್ಪ ಹಳಕಟ್ಟಿಯವರ ಪುತ್ರನಾಗಿ ತಂದೆಯ ಸಮಾಜ ಸೇವಾಸಕ್ತ ಶರಣ ಗುಣಗಳನ್ನು ಬಳುವಳಿಯಾಗಿ ಪಡೆದು ಮದ್ರಾಸ್‍ನಲ್ಲಿ ಉನ್ನತ ಶಿಕ್ಷಣ ಪಡೆದು ವಿಜಯಪುರದಲ್ಲಿ ವಕೀಲಿ ವೃತ್ತಿ ಆರಂಭಿಸಿದರು ಎಂದರು.
ಡಾ. ಫ.ಗು. ಹಳಕಟ್ಟಿ ಅವರ ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ವಚನಗಳನ್ನು ಮುದ್ರಿಸಿದವರು. ಹಳಕಟ್ಟಿಯವರು ಸ್ವತಃ ಮೊಳೆಗಳನ್ನು ಜೋಡಿಸಿ, ಅಚ್ಚು ಹಾಕಿ, ಪೆಡಲ್ ತುಳಿದು, ಮುದ್ರಿಸಿ ಪ್ರಕಟಿಸಿದ ಸಾಹಿತ್ಯದಿಂದ 250 ವಚನಕಾರರ ವಚನಗಳನ್ನು, ಸಾಹಿತ್ಯವನ್ನು ಹೊರತಂದರು. ಆ ಮುಂಚೆ ಕೇವಲ 50 ವಚನಕಾರರ ವಚನಗಳು ಬೆಳಕು ಕಂಡಿದ್ದವು.
ವಚನ ಸಾಹಿತ್ಯಕ್ಕೆ ಅವರು ನೀಡಿದ ಅಮೋಘ ಕೊಡುಗೆ. ಹಾಗಾಗಿ ಅವರನ್ನು ‘ವಚನ ಪಿತಾಮಹ' ಎಂದು ಕರೆಯಲಾಗುತ್ತದೆ. ಡಾ.ಫ.ಗು.ಹಳಕಟ್ಟಿ ಅವರ ಸಾಹಿತ್ಯ ಸೇವೆ ಮೆಚ್ಚಿ 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದರು.
ಬಳ್ಳಾರಿಯ ದೊಡ್ಡಯ್ಯ ವಿ.ಕಲ್ಲೂರು ಅವರ ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಉಪತಹಶೀಲ್ದಾರ ಮಹಮ್ಮದ್ ಸಾಧಿಕ್ ಭಾಷಾ, ಜಿಲ್ಲಾ ದೈಹಿಕ ಶಿಕ್ಷಕ ಕೊಟ್ರೇಶ್, ನಿವೃತ್ತ ಪಿಎಸ್‍ಐ ಹುಸೇನ್ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್