ಬೆಂಗಳೂರು, 18 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವೇಶ್ವರಯ್ಯ ಪ್ರತಿಷ್ಠಾನ ರಾಷ್ಟ್ರ ಮಟ್ಟದಲ್ಲಿ ಪತ್ರಿಕೋದ್ಯಮ ಸೇವೆ ಸಲ್ಲಿಸಿದ, 10 ಜನ ಗಣ್ಯರನ್ನು ಗುರುತಿಸಿ, ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ದತ್ತಿನಿಧಿ ಸ್ಥಾಪಿಸಲಿದೆ. ರಾಷ್ಟ್ರ ಕಟ್ಟುವಲ್ಲಿ ಪತ್ರಿಕೆಯನ್ನು ಒಂದು ಭಾಗವಾಗಿ ಪರಿಗಣಿಸಿ, ಸೇವೆ ಸಲ್ಲಿಸಿದ ಈ ಗಣ್ಯರನ್ನು ಕುರಿತು ರಾಷ್ಟ್ರ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದೆ.
ಪ್ರಬಂಧ ಕನಿಷ್ಠ 10 ರಿಂದ 15 ಪುಟದೊಳಗಿರಲಿ. ಹಸ್ತ ಪ್ರತಿ ಟೈಪ್ ಮಾಡಿರಬೇಕು (ದುಂಡುಬರಹದ ಹೊರತಾಗಿ). ಪ್ರಬಂಧಕ್ಕಾಗಿ ಮಾಹಿತಿ ಸಂಗ್ರಹಿಸಿದ ಪುಸ್ತಕ, ದಾಖಲೆ ಹಾಗೂ ರೆಫರೆನ್ಸ್‍ಗಳ ಮಾಹಿತಿಯನ್ನು ಪ್ರಬಂಧದ ಕೊನೆಯಲ್ಲಿ ಸವಿವರವಾಗಿ ದಾಖಲಿಸಿರಬೇಕು.
ಗಣ್ಯರ ಹೆಸರು : ಮಹಾತ್ಮಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಫ.ಗು. ಹಳಕಟ್ಟಿ, ಡಿ ವಿ ಗುಂಡಪ್ಪ, ಪಾಟೀಲ್ ಪುಟ್ಟಪ್ಪ, ಪಿ. ಲಂಕೇಶ್, ರವಿಬೆಳಗೆರೆ, ಜಯದೇವಿ ತಾಯಿ ಲಿಗಾಡೆ, ವಿಜಯ್ ಸಂಕೇಶ್ವರ್. ಈ 10 ಜನ ದೇಶದ ಗಣ್ಯರು ತಮ್ಮ ವೃತ್ತಿ ಸೇವೆಯ ಜೊತೆಗೆ ಪತ್ರಿಕೋದ್ಯಮದ ಸೇವೆಗೆ ಪ್ರಬಂಧ ಒತ್ತು ಕೊಟ್ಟಿರಲಿ. ಅವರ ಪತ್ರಿಕೋದ್ಯಮ ಸೇವೆ ಹಾಗೂ ಸಮಗ್ರ ದಾಖಲೆ ಒಳಗೊಂಡಿರಲಿ. ಇವರುಗಳ ಪತ್ರಿಕಾ ಸೇವೆಯ ದಾಖಲೆಗಳ ಮೂಲಕ ಅವರನ್ನು ಮುಂದಿನ ಜನಾಂಗ ನೆನೆಪಿಸಲಿ, ಇದರ ಮಾರ್ಗದರ್ಶನದಲ್ಲಿ ತಾವು ಬೆಳೆಯಲಿ ಎಂಬ ಸದಾಶಯವನಿಟ್ಟು ಈ ಪ್ರಶಸ್ತಿ ಪ್ರಾರಂಬಿಸಲಾಗುತ್ತಿದೆ.
ತೀರ್ಪುಗಾರರು ಆಯ್ಕೆ ಮಾಡಿದ ಪ್ರಬಂಧಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಗೌರವವಿದೆ. ಪ್ರಥಮ ಬಹುಮಾನದ ಎಲ್ಲ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ಪ್ರತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಂಚುವ ಉದ್ದೇಶವಿದೆ. ಉಳಿದ ದ್ವಿತೀಯ ಹಾಗೂ ತೃತೀಯ ಬಹುಮಾನಗಳ ಲೇಖನವನ್ನು ಸಂಸ್ಥೆಯ ಪ್ರಾಯೋಜಕತ್ವದ ಸುರ್ವೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಪ್ರಥಮ, ದ್ವಿತೀಯ, ತೃತೀಯ ಬಹುಮಾನದ 30 ಲೇಖಕರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಗೌರವವಿರುತ್ತದೆ. ಪ್ರಥಮ 2 ಸಾವಿರ, ದ್ವಿತೀಯ 1500, ತೃತೀಯ 1000 ರೂ.ಗಳ ಒಟ್ಟು 50 ಸಾವಿರ ರೂ.ಗಳ ಬಹುಮಾನವನ್ನು ರಾಷ್ಟ್ರಪ್ರಶಸ್ತಿ ಒಳಗೊಂಡಿರುತ್ತದೆ. ಗೌರವ ಫಲಕ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತದೆ.
ಪ್ರಬಂಧದ ಕೊನೆಯಲ್ಲಿ ಲೇಖಕರ ಸಂಪೂರ್ಣ ವಿಳಾಸ, ಇಮೇಲ್, ದೂರವಾಣಿ ಸಂಖ್ಯೆ ಹಾಗೂ 2 ಭಾವಚಿತ್ರ ಕನಿಷ್ಟ 2 ಪುಟದ ವೈಯಕ್ತಿಕ ಬಯೋಡಾಟಾ ಲಗತ್ತಿಸಿ. ಪ್ರಬಂಧಕ್ಕೆ ಕೊನೆಯ ದಿನಾಂಕ 01-11-2025.
ಕಳುಹಿಸುವ ವಿಳಾಸ : ಅಧ್ಯಕ್ಷರು, ಪ್ರಬಂಧ ವಿಭಾಗ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮಂಜುನಾಥನಗರ, ಬೆಂಗಳೂರು-560010.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್