ಹೂಸ್ಟನ್, 14 ಜುಲೈ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮಿಷನ್ X-4 ಸಹಿತ 18 ದಿನಗಳ ಕಾಲ ವಾಸಿಸಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಅವರ ತಂಡದ ಸದಸ್ಯರು ಇಂದು ಮಧ್ಯಾಹ್ನ ನಿಲ್ದಾಣದಿಂದ ಬೇರ್ಪಡಲಿದ್ದಾರೆ. ಅವರು ನಾಳೆ ಜುಲೈ 15ರಂದು ಭೂಮಿಗೆ ಯಶಸ್ವಿಯಾಗಿ ಮರಳಲಿದ್ದಾರೆ.
ನಾಸಾ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ನಿರ್ಗಮನ ಪ್ರಕ್ರಿಯೆ ಇಂದು ಬೆಳಿಗ್ಗೆ 4:30 ಕ್ಕೆ ಪ್ರಾರಂಭವಾಗಲಿದ್ದು, ತಂಡವು ಬೆಳಿಗ್ಗೆ 7:05ಕ್ಕೆ ಭೂಮಿಗೆ ಹೊರಡಲಿದೆ. ಈ ಪ್ರಕ್ರಿಯೆಯ ನೇರ ಪ್ರಸಾರ ನಾಸಾ ಪ್ಲಸ್ ಹಾಗೂ ಆಕ್ಸಿಯಮ್ ಸ್ಪೇಸ್, ಸ್ಪೇಸ್‌ಎಕ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರಲಿದೆ.
ಡ್ರ್ಯಾಗನ್ ಗ್ರೇಸ್ ಬಾಹ್ಯಾಕಾಶ ನೌಕೆ, ಭೂಮಿಗೆ ಮರಳುವ ಹಾದಿಯಲ್ಲಿ ಸುಮಾರು 22.5 ಗಂಟೆಗಳ ಪ್ರಯಾಣ ನಡೆಸಲಿದ್ದು, ಜುಲೈ 15 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಆಗಲಿದೆ.
ಭಾನುವಾರ ವಿದಾಯ ಭಾಷಣದಲ್ಲಿ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಈ ಬಾಹ್ಯಾಕಾಶ ಯಾನವನ್ನು ಮ್ಯಾಜಿಕ್ ಎಂದು ವರ್ಣಿಸಿದರು. “ಇಂದಿನ ಭಾರತವು ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯೊಂದಿಗೆ ಕಾಣಿಸುತ್ತದೆ. ಬಾಹ್ಯಾಕಾಶದಿಂದ ಭಾರತ 'ಸಾರೆ ಜಹಾಂ ಸೆ ಅಚ್ಛಾ' ಎಂಬಂತೆ ಕಾಣುತ್ತದೆ,” ಎಂದು ಅವರು ಹೇಳಿದರು.
ಇಸ್ರೋ, ನಾಸಾ, ಆಕ್ಸಿಯಮ್ ಸ್ಪೇಸ್ ಹಾಗೂ ಸ್ಪೇಸ್‌ಎಕ್ಸ್ ಸಂಸ್ಥೆಗಳಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ತಂಡದಲ್ಲಿ ಇಸ್ರೋ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ಪೋಲೆಂಡ್‌ನ ಇಎಸ್‌ಎ ಗಗನಯಾತ್ರಿ ಸ್ಲಾವೋಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ, ಹಂಗೇರಿಯ ಟಿಬೋರ್ ಕಪು ಸೇರಿದಂತೆ ನಾಲ್ವರು ಸದಸ್ಯರಿದ್ದಾರೆ.
ಡ್ರ್ಯಾಗನ್ ನೌಕೆ 580 ಪೌಂಡ್ಗಿಂತ ಅಧಿಕ ಸರಕುಗಳನ್ನು ಕೊಂಡೊಯ್ಯುತ್ತಿದ್ದು, ನಾಸಾ ಕಾರ್ಯಾಚರಣೆಯಲ್ಲಿ ನಡೆಸಲಾದ 60 ಕ್ಕೂ ಹೆಚ್ಚು ವಿಜ್ಞಾನ ಪ್ರಯೋಗಗಳ ಡೇಟಾವನ್ನು ಕೂಡ ಭೂಮಿಗೆ ತರಲಿದೆ.
ಈ ಮಿಷನ್ ಅನ್ನು ಜೂನ್ 25 ರಂದು ನಾಸಾ ಕೇಂದ್ರೀಕೃತ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಮೂಲಕ ಪ್ರಾರಂಭಿಸಲಾಯಿತು.
ಶುಭಾಂಶು ಶುಕ್ಲಾ ಅವರ ತಂದೆ ಶಂಭು ದಯಾಳ್ ಶುಕ್ಲಾ, ಲಕ್ನೋನಲ್ಲಿ ತಮ್ಮ ಮಗ ಸುರಕ್ಷಿತವಾಗಿ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. “ಅವರು ಲಕ್ನೋಗೆ ಯಾವಾಗ ವಾಪಸ್ ಬರುತ್ತಾರೆ ಎಂಬುದು ವೈದ್ಯಕೀಯ ವರದಿ ನಂತರ ನಿರ್ಧಾರವಾಗುತ್ತದೆ,” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa