ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ಕೈಗಾರಿಕೆ ವಲಯಗಳಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಯುವ ಸಮುದಾಯದಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಕೈಗಾರಿಕೆಗಳೂ ಸಹಭಾಗಿತ್ವ ತೋರಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ. ರಮಣ ರೆಡ್ಡಿ ಅವರು ತಿಳಿಸಿದ್ದಾರೆ.
ಸಂಡೂರು ತಾಲ್ಲೂಕಿನಲ್ಲಿ ಸ್ಕಿಲ್ ಪಾರ್ಕ್/ಅಕಾಡೆಮಿ ಸ್ಥಾಪಿಸುವ ಸಂಬಂಧ ಮೈನಿಂಗ್ ಮತ್ತು ಸ್ಟೀಲ್ ಇಂಡಸ್ಟ್ರೀಸ್ ಹಾಗೂ ಪಾಲುದಾರರ ಜೊತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕೈಗಾರಿಕೆ-ಪಾಲುದಾರರೊಂದಿಗೆ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ಕೈಗಾರಿಕೆಗಳು ಮತ್ತು ಪಾಲುದಾರರ ನಡುವಿನ ಅಂತರವನ್ನು ಕಡಿಮೆ ಮಾಡಲು ಹಾಗೂ ಉದ್ಯೋಗ ಕ್ಷೇತ್ರದಲ್ಲಿನ ಬೇಡಿಕೆಗಳನ್ನು ಪೂರೈಸಲು ಸಹಯೋಗ, ಸಹಭಾಗಿತ್ವ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಬೇಕಿದೆ ಎಂದು ತಿಳಿಸಿದರು.
ಪ್ರಸ್ತುತದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗಳಿಗೆ ಸೀಮಿತವಾಗಿದ್ದಾರೆ. ಬದಲಾಗಿ ಅವರಿಗೆ ಕೌಶಲ್ಯತೆ ಆಧಾರಿತ ಶಿಕ್ಷಣ ಮೌಲ್ಯವು ನೀಡಬೇಕಿದೆ. ಹಾಗಾಗಿ ಇದಕ್ಕೆ ಕೈಗಾರಿಕೆಗಳ ಸಹಭಾಗಿತ್ವವೂ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಜಿಲ್ಲೆಯಲ್ಲಿ ಕೈಗಾರಿಕಾ ವಲಯಗಳು ಹೆಚ್ಚಾಗಿದ್ದು, ಉದ್ಯೋಗದಾತರು ಕೌಶಲ್ಯ ಶಿಕ್ಷಣ ಅಳವಡಿಸಬೇಕು. ಜೊತೆಗೆ ಸುರಕ್ಷತೆ ಮತ್ತು ದಕ್ಷತೆಗೆ ಆದ್ಯತೆ ನೀಡಬೇಕು. ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಸಹಕಾರ ಜಿಲ್ಲಾಡಳಿತ ನೀಡಲಿದೆ ಎಂದು ಹೇಳಿದರು.
ಬೆಂಗಳೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ. ದಿನೇಶ್ ಕುಮಾರ್ ವೈ.ಕೆ., ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸೋಮಶೇಖರ ಸೇರಿದಂತೆ ಜಿಲ್ಲೆಯ ವಿವಿಧ ಮೈನಿಂಗ್ ಮತ್ತು ಸ್ಟೀಲ್ ಕಾರ್ಖಾನೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್