ನಲ್ ಜಲ್ ಕೌಶಲ್ಯ ತರಬೇತಿಗೆ ಚಾಲನೆ
ಕುರುಗೋಡು, 23 ಜೂನ್ (ಹಿ.ಸ.) : ಆ್ಯಂಕರ್ : ಮಹಿಳೆಯು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ತನ್ನ ಜೀವನದಲ್ಲಿ ಗುರಿ ತಲುಪಲು ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿ ಎಂದು ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಹೇಳಿದ್ದಾರೆ. ಸೋಮವಾರದಂದು, ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ
ನಲ್ ಜಲ್ ಕೌಶಲ್ಯ ತರಬೇತಿಗೆ ಚಾಲನೆ


ಕುರುಗೋಡು, 23 ಜೂನ್ (ಹಿ.ಸ.) :

ಆ್ಯಂಕರ್ : ಮಹಿಳೆಯು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ತನ್ನ ಜೀವನದಲ್ಲಿ ಗುರಿ ತಲುಪಲು ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿ ಎಂದು ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಹೇಳಿದ್ದಾರೆ.

ಸೋಮವಾರದಂದು, ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ‘ನಲ್ ಜಲ್ ಮಿತ್ರ’ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ಜಾಬ್ ರೋಲ್ ಗೆ ಕುರಿತು ಮಹಿಳಾ ಸದಸ್ಯರಿಗೆ 17 ದಿನಗಳ ಕಾಲ ನೀಡಲಾಗುವ ಬಹುಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಲ್-ಜಲ್ ಮಿತ್ರ ಯೋಜನೆಯಡಿ ಸಾಕಷ್ಟು ಸೌಲಭ್ಯಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರೆಯಲು ಕೌಶಲ್ಯ ತರಬೇತಿಗಳು ಮುಖ್ಯ ಪಾತ್ರವಹಿಸುತ್ತವೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ನಲ್-ಜಲ್ ಮಿತ್ರ ಎನ್ನುವ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಗಳಲ್ಲಿ ಕೆಲಸ ನಿರ್ವಹಿಸಲು ಮಹಿಳೆಯರಿಗೆ 17 ದಿನಗಳ ಕಾಲ ಕ್ಲಾಸ್ ರೂಮ್ ತರಬೇತಿ ಮತ್ತು 23 ದಿನಗಳ ಕಾಲ ಒಜೆಟಿ ತರಬೇತಿ ನೀಡಲಾಗುವುದು ಎಂದರು.

ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಜಲಜೀವನ್ ಮಿಷನ್ ಯೋಜನೆಯು ಗುರಿ ಹೊಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಪೂರ್ಣಗೊಳಿಸುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನಲ್–ಜಲ್ ಯೋಜನೆಯಡಿ ನಿರ್ವಾಹಕರಿಗೆ ಕೌಶಲ್ಯ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಯೋಜನಾ ನಿರ್ದೇಶಕ ವಿನೋದ್ ಕುಮಾರ್ ಅವರು ಮಾತನಾಡಿ, ಜಲಜೀವನ್ ಮಿಷನ್ ನೆಟ್‍ವರ್ಕ್ ವ್ಯವಸ್ಥೆ, ಪೈಪ್ ಲೈನ್ ದುರಸ್ಥಿ ಹಾಗೂ ಇತರೆ ಕಾರ್ಯಗಳ ಕುರಿತು ನಲ್-ಜಲ್ ಮಿತ್ರರಿಗೆ ತರಬೇತಿ ನೀಡಲಾಗುವುದು ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟಪ್ಪ ಅಮರು ಮಾತನಾಡಿ, ನಲ್-ಜಲ್ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ ನೀಡುವ ಕೌಶಲ್ಯ ತರಬೇತಿಯು ತುಂಬಾ ಉಪಯುಕ್ತವಾಗಿದೆ. ಈಗಾಗಲೇ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಮಾಸ್ಟರ್ ಟ್ರೈನರ್ಸ್‍ಗಳು ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡಿದ್ದು, ಅವರಿಂದಲೇ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಕುರುಗೋಡು ತಾಪಂ ಇಒ ನಿರ್ಮಲಾ, ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ವಿ.ತಿಮ್ಮರಾಜು ಸೇರಿದಂತೆ ಐಟಿಐ ಕಾಲೇಜಿನ ಸಿಬ್ಬಂದಿಗಳು ಮತ್ತು ಎನ್.ಆರ್.ಎಲ್.ಎಂ ಯೋಜನೆಯ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande