ಬೆಂಗಳೂರು, 02 ಜೂನ್ (ಹಿ.ಸ.) :
ಆ್ಯಂಕರ್ : ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಎಲ್ಲ ರೈತರನ್ನು ಹಾಗೂ ಸರ್ವಪಕ್ಷಗಳ ಪ್ರಮುಖರನ್ನು ಕರೆದು ಸಭೆ ಮಾಡಿ ಚರ್ಚಿಸಬೇಕು. ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಗೆ ಹೇಮಾವತಿ ನೀರು ನೀಡಲು ತುಮಕೂರಿನ ರೈತರು ಪ್ರತಿಭಟಿಸುತ್ತಿರುವಾಗ, ಎರಡೂ ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ರೈತರ ಜೊತೆ ಸರ್ಕಾರ ಚರ್ಚಿಸಬೇಕಿತ್ತು. ಈ ಕೆಲಸವನ್ನು ಸರ್ಕಾರ ಮಾಡದೆಯೇ ರೈತರ ನಡುವೆಯೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ರೈತರಿಗೆ ಮನವರಿಕೆ ಮಾಡುವ ಬದಲು ಬೆದರಿಕೆ ಹಾಕುವುದು ಒಳ್ಳೆಯದಲ್ಲ. ಎಲ್ಲ ರೈತರನ್ನು ಸಮಭಾವದಿಂದ ನೋಡಬೇಕೆ ಹೊರತು, ಮಠಾಧೀಶರ ಮೇಲೆ, ಜನಪ್ರತಿನಿಧಿಗಳ ಮೇಲೆ ಪ್ರಕರಣ ದಾಖಲಿಸಬಾರದು. ಕಾಂಗ್ರೆಸ್‌ನ ಶಾಸಕರೇ ಆದ ಗುಬ್ಬಿ ಶ್ರೀನಿವಾಸ್ ಕೂಡ ಇದರ ವಿರುದ್ಧ ನಿಂತಿದ್ದಾರೆ ಎಂದರು.
ರೈತರ ವಿರುದ್ಧ ಪ್ರಕರಣ ದಾಖಲಿಸುವುದು ಅಕ್ಷಮ್ಯ ಅಪರಾಧ. ರೈತರ ಜೊತೆಗೆ ಚರ್ಚಿಸಿ ಸಮನ್ವಯ ಸಾಧಿಸಬೇಕು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುರ್ಚಿ ಹೋದರೆ ಅಧಿಕಾರವೇ ಇರುವುದಿಲ್ಲ. ರಾಜ್ಯ ಸರ್ಕಾರ ಎರಡು ಜಿಲ್ಲೆಗಳ ಜನಪ್ರತಿನಿಧಿಗಳ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು, ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa