ಬೆಂಗಳೂರು, 31 ಮೇ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಜಿಂಕೆಗಳಿಂದ ರೈತರ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 15,16,731 ಎಕರೆ ಅರಣ್ಯೀಕರಣಕ್ಕೆ ಜಮೀನು ಲಭ್ಯವಿದೆ. 8.5 ಕೋಟಿ ಸಸಿಗಳನ್ನು ಕಳೆದ ಎರಡು ವರ್ಷಗಳಲ್ಲಿ ನೆಡಲಾಗಿದೆ. ಪ್ರತಿ ವರ್ಷ ಎಷ್ಟು ಎಕರೆ ಅರಣ್ಯೀಕರಣವಾಗಿದೆ? ಕಳೆದ 10ವರ್ಷಗಳಲ್ಲಿ ಎಷ್ಟು ಎಕರೆ ಅರಣ್ಯೀಕರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.
ಅರಣ್ಯೀಕರಣಕ್ಕೆ ಲಭ್ಯವಿರುವ ಜಮೀನಿನಲ್ಲಿ ಸಂಪೂರ್ಣ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು.
ಆನೆ ಮತ್ತು ಮಾನವ ಸಂಘರ್ಷ ತಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು. ಆನೆ ಕಾರ್ಯಪಡೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಆನೆಗಳಿಗೆ ಸರಿಯಾದ ಆಹಾರ ಕಾಡಿನಲ್ಲೇ ಲಭ್ಯವಾಗುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ಲಂಟಾನಾ ಕಳೆಗಳನ್ನು ತೆಗೆಯುವ ಕೆಲಸವಾಗಬೇಕು. ಇದೇ ರೀತಿ ಕುಡಿಯುವ ನೀರಿನ ಲಭ್ಯತೆಯೂ ಕಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa