ಮುಂಬಯಿ, 26 ಮೇ (ಹಿ.ಸ.) :
ಆ್ಯಂಕರ್ : ಅವಧಿಗೆ ಮುಂಚಿತವಾಗಿ ಕೇರಳಕ್ಕೆ ಆಗಮಿಸಿದ ಮುಂಗಾರು ಮಾರುತ ಇದೀಗ ಮಹಾರಾಷ್ಟ್ರವನ್ನೂ ಆವರಿಸಿದೆ. ಮಹಾರಾಷ್ಟ್ರದ ಇತಿಹಾಸದಲ್ಲಿ 35 ವರ್ಷಗಳ ಬಳಿಕ ಮುಂಗಾರು ಅವಧಿಗೆ ಮುನ್ನ ಆಗಮಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 1990ರಲ್ಲಿ ಮೇ 20ರಂದು ಮಹಾರಾಷ್ಟ್ರದಲ್ಲಿ ಮುಂಗಾರು ಆಗಮಿಸಿತ್ತು ಎಂದು ಇಲಾಖೆ ತಿಳಿಸಿದೆ.
ಭಾನುವಾರ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಬಂಗಾಳ ಕೊಲ್ಲಿಯ ಉತ್ತರ ಭಾಗ ಮತ್ತು ಮಿಜೋರಾಂನ ಕೆಲವು ಭಾಗಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನ ಕೆಲವು ಭಾಗಗಳಿಗೆ ಮುಂಗಾರು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಬೈನಲ್ಲಿ ಸೋಮವಾರ ಮುಂಜಾನೆಯ ಗಾಳಿಯಬ್ಬರದ ಜೊತೆಗೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುತ್ತಿದ್ದು, ನಗರದ ರೈಲು ಸೇವೆಯಲ್ಲೂ ಕೂಡ ವ್ಯತ್ಯಯವಾಗಿದೆ. ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮುಂಗಾರು ಮುಂಬೈ ಹಾಗೂ ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa