ಹುಬ್ಬಳ್ಳಿ, 25 ಮೇ (ಹಿ.ಸ.):
ಆ್ಯಂಕರ್:
ಕಾರಂಜೋಲ್ ಮತ್ತು ಕ್ಯಾಸಲ್ ರಾಕ್ ನಡುವಿನ ವಿಭಾಗದಲ್ಲಿ 25 ಮೇ ಮಧ್ಯರಾತ್ರಿ 2:30ಕ್ಕೆ ವಾಸ್ಕೋ ಡ ಗಾಮಾ - ಯಶವಂತಪುರ ರೈಲು (ಸಂ.17310) ಖಾಲಿ ಬೋಗಿಯೊಂದು ಹಳಿತಪ್ಪಿದ್ದು ಕೆಲ ರೈಲು ಸಂಚಾರದಲ್ಲಿ ವಿಳಂಭವಾಗಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಘಟನೆಗೆ ಸಂಬಂಧಿಸಿ, 25 ಮೇ ಬೆಳಿಗ್ಗೆ 6:30ಕ್ಕೆ ಹೊರಡಬೇಕಿದ್ದ ವಾಸ್ಕೋ ಡ ಗಾಮಾ - ಶಾಲಿಮಾರ್ ರೈಲು (ಸಂ.18048)ನ್ನು 2 ಗಂಟೆಗಳ ವಿಳಂಬದಿಂದ ಬೆಳಿಗ್ಗೆ 8:30ಕ್ಕೆ ಮರು ನಿಗದಿಪಡಿಸಲಾಗಿದೆ. ಹಜರತ್ ನಿಜಾಮುದ್ದೀನ್ - ವಾಸ್ಕೋ ಡ ಗಾಮಾ ರೈಲು (ಸಂ.12780) ಲೋಂಡಾ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಪ್ರಯಾಣಿಕರಿಗಾಗಿ ಲೋಂಡಾದಲ್ಲಿ ಉಪಹಾರ, ಚಹಾ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಪಘಾತ ಪರಿಹಾರ ರೈಲು ಸ್ಥಳಕ್ಕೆ ಕಳುಹಿಸಲ್ಪಟ್ಟಿದ್ದು, ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪುನಃಸ್ಥಾಪನಾ ಕಾರ್ಯ ಮುಂದುವರೆದಿದೆ ಎಂದು ನೈಋತ್ಯ
ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa