
ಬೆಳಗಾವಿ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಇಂದಿನಿಂದ ಬೆಳಗಾವಿಯಲ್ಲಿ ಆರಂಭವಾಗಲಿದೆ.
ಡಿಸೆಂಬರ್ 19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಸಾಧ್ಯತೆ ಇದೆ.
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಸಜ್ಜಾಗಿದೆ. ಪ್ರತಿಪಕ್ಷಗಳ ದಾಳಿ ಎದುರಿಸಲು ಸರ್ಕಾರ ಸಿದ್ದವಾಗಿದೆ.
ಅಧಿಕಾರ ಹಸ್ತಾಂತರ ಕುರಿತಾಗಿ ರಾಜ್ಯ ಸರ್ಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವ ಹಿನ್ನೆಲೆ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ಪ್ರತಿ ಪಕ್ಷ ಬಿಜೆಪಿ ಚಿಂತಿಸಿತ್ತು. ಆದರೆ, ಈಗ ತನ್ನ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ.
ಸರ್ಕಾರದ ವಿವಾದಾತ್ಮಕ ನಡೆಗಳು ಮತ್ತು ಉತ್ತರ ಕರ್ನಾಟಕದ ಜನರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಈ ಅಧಿವೇಶನ ವಿಶೇಷ ಗಮನ ಸೆಳೆಯುತ್ತಿದೆ. ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದ್ದು, ಸಂತಾಪದ ಬಳಿಕ ಎರಡು ಸದನಗಳ ಕಲಾಪವನ್ನು ಮುಂದೂಡುವ ಸಾಧ್ಯತೆಗಳಿವೆ.
ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa