
ಬೆಳಗಾವಿ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಡಿಸೆಂಬರ್ 8ರಿಂದ ಆರಂಭಗೊಳ್ಳಲಿರುವ ಬೆಳಗಾವಿಯ ಸುವರ್ಣಸೌಧದ ಚಳಿಗಾಲದ ಅಧಿವೇಶನಕ್ಕಾಗಿ ಕುಂದಾನಗರಿ ಸಜ್ಜಾಗಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಅಧಿಕಾರಿಗಳು-ಸಿಬ್ಬಂದಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲಾಡಳಿತವು 3 ಸಾವಿರಕ್ಕೂ ಹೆಚ್ಚು ರೂಮುಗಳನ್ನು ಬುಕ್ ಮಾಡಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಅತಿಥಿ ಗೃಹದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ದೆಹಲಿ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದ ಘಟನೆ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯ ಮೇರೆಗೆ ಸುವರ್ಣಸೌಧದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ. 6 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಭದ್ರತೆಗಾಗಿ 6 ಎಸ್ಪಿ ಮಟ್ಟದ ಅಧಿಕಾರಿಗಳು, 146 ಹಿರಿಯ ಪೊಲೀಸ್ ಅಧಿಕಾರಿಗಳು, 3,820 ಸಿಬ್ಬಂದಿ, 500 ಹೋಂ ಗಾರ್ಡ್ಸ್, 8 ಕ್ಯೂಆರ್‌ಟಿ, 10 ಡಿಎಆರ್, 35 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಬಿಡಿಡಿಎಸ್, ಗರುಡಾ ಫೋರ್ಸ್ ಹಾಗೂ 16 ಬಾಂಬ್ ತಪಾಸಣಾ ತಂಡಗಳನ್ನು ಸೇರಿಸಲಾಗಿದೆ. ಸುವರ್ಣಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿದ್ದು, ಸುವರ್ಣ ಗಾರ್ಡನ್ ಹಾಗೂ ಅಲಾರವಾಡ ಪ್ರದೇಶಗಳಲ್ಲಿ ಪ್ರತಿಭಟನೆಗಳಿಗೆ ನಿಗದಿತ ಸ್ಥಳ ಒದಗಿಸಲಾಗಿದೆ.
ಚಳಿಗಾಲದ ಅಧಿವೇಶನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬೆಳಗಾವಿಗೆ ಆಗಮಿಸಿದ್ದಾರೆ. ನಾಳೆ ಆರಂಭವಾಗುವ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸರಕಾರದ ವಿರುದ್ದ ಭ್ರಷ್ಟಾಚಾರ ಹಾಗೂ ಅಧಿಕಾರ ಹಂಚಿಕೆ ಕುರಿತು ನಡೆದಿರುವ ಗೊಂದಲದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ವಿರುದ್ದ ಮುಗಿಬಿಳುವ ಸಾಧ್ಯತೆಗಳಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa