

ಹೊಸಪೇಟೆ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನವರಿ 1 ರಿಂದ 30ರ ವರಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ದತೆಯನ್ನು ಕೈಗೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್ ಹೇಳಿದರು.
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.
ರಸ್ತೆ ನಿಯಮಗಳ ಪಾಲನೆ, ಅಪಘಾತ ತಡೆಗಟ್ಟುವಿಕೆ ಮತ್ತು ಸುರಕ್ಷಿತ ರಸ್ತೆ ಸಂಚಾರದ ಕುರಿತು ಜನಸಾಮಾನ್ಯರು, ಯುವಜನರು ಸೇರಿದಂತೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾಗಳು, ಬೀದಿ ನಾಟಕಗಳು ಮತ್ತು ಎಲ್ಲಾ ಶಾಲಾ-ಕಾಲೇಜಿಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಎಂದರು.
15 ವರ್ಷ ಮುಗಿದ ಶಾಲೆ ವಾಹನಗಳನ್ನು ಚಲಾಯಿಸುವಂತಿಲ್ಲ. ನಗರದಲ್ಲಿ ವಾಹನಗಳ ಸಂಖ್ಯೆಯು ಹೆಚ್ಚಾಗಿದ್ದು ಅವುಗಳನ್ನು ಸರಿಯಾದ ರೀತಿ ಪಾರ್ಕಿಂಗ್ ಮಾಡುತ್ತಿಲ್ಲ. ಅದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಸೂಕ್ತ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಬೇಕು. 18 ವರ್ಷದೊಳಗಿನ ಮಕ್ಕಳು ವಾಹನಗಳನ್ನು ಚಲಾಯಿಸುತ್ತಿದ್ದು ಅವರ ಪೋಷಕರ ಮೇಲೆ ಪ್ರಕರಣ ದಾಖಲಿಸಿ 25 ಸಾವಿರು ರೂ. ದಂಡವನ್ನು ವಿಧಿಸಬೇಕು. ಹೈವೇ ರಸ್ತೆಯಲ್ಲಿ ಕೆಟ್ಟುನಿಂತ ವಾಹನಗಳನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸದೇ ರಸ್ತೆ ಬದಿಗೆ ಹಾಕಿ ರಿಪೇರಿ ಮಾಡಬೇಕು ಎಂದರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಮಾರ ಸ್ವಾಮಿ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಸುಬ್ರಮಣ್ಯ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಕೆ.ದಾಮೋದರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್