
ವಾಷಿಂಗ್ಟನ್, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (ಎಚ್ಎಚ್ಎಸ್) ಮಿನ್ನೇಸೋಟ ರಾಜ್ಯಕ್ಕೆ ನೀಡಲಾಗುತ್ತಿದ್ದ ಫೆಡರಲ್ ಮಕ್ಕಳ ಆರೈಕೆ ನಿಧಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಈ ಕುರಿತು ಮಂಗಳವಾರ ಹೇಳಿಕೆ ನೀಡಿದ ಎಚ್ಎಚ್ಎಸ್ ಉಪ ಕಾರ್ಯದರ್ಶಿ ಜಿಮ್ ಒ'ನೀಲ್, “ಮಿನ್ನೇಸೋಟ ಸೇರಿದಂತೆ ದೇಶದಾದ್ಯಂತ ವ್ಯಾಪಕ ಮತ್ತು ಸ್ಪಷ್ಟ ವಂಚನೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ನಿಧಿ ಪಾವತಿಯನ್ನು ನಿಲ್ಲಿಸಲಾಗಿದೆ” ಎಂದು ತಿಳಿಸಿದರು.
ಸಿಬಿಎಸ್ ನ್ಯೂಸ್ ವರದಿ ಪ್ರಕಾರ, ಸಂಪ್ರದಾಯವಾದಿ ಯೂಟ್ಯೂಬರ್ ನಿಕ್ ಶಿರ್ಲಿ ಬಿಡುಗಡೆ ಮಾಡಿದ ವೀಡಿಯೊವನ್ನು ಉಲ್ಲೇಖಿಸಿರುವ ಒ'ನೀಲ್, ಮಿನ್ನೇಸೋಟದ ಸುಮಾರು ಒಂದು ಡಜನ್ ಡೇ ಕೇರ್ ಕೇಂದ್ರಗಳು ವಾಸ್ತವದಲ್ಲಿ ಮಕ್ಕಳಿಗೆ ಯಾವುದೇ ಸೇವೆ ನೀಡದೇ ನಿಧಿ ಪಡೆದುಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ವೀಡಿಯೊದಲ್ಲಿ ಉಲ್ಲೇಖಿಸಲಾದ ಕೇಂದ್ರಗಳನ್ನು ಇಲಾಖೆ ಗುರುತಿಸಿದ್ದು, ಅವುಗಳ ಕುರಿತು ರಾಜ್ಯ ಸರ್ಕಾರದಿಂದ ವಿವರವಾದ ವರದಿ ಕೋರಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ದಾಖಲೆಗಳ ಪ್ರಕಾರ, ಉಲ್ಲೇಖಿಸಲಾದ ಕೇಂದ್ರಗಳಲ್ಲಿ ಎರಡು ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ಮಾನ್ಯತೆ ಪಡೆದಿವೆ. ಈ ಹಿನ್ನೆಲೆಯಲ್ಲಿ ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಅವರ ವಕ್ತಾರರು ಪ್ರತಿಕ್ರಿಯಿಸಿ, “ಗವರ್ನರ್ ಹಲವು ವರ್ಷಗಳಿಂದ ವಂಚನೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ವಂಚನೆ ಗಂಭೀರ ವಿಷಯವಾದರೂ, ಇದನ್ನು ರಾಜಕೀಯಗೊಳಿಸಬಾರದು. ಇಂತಹ ಕ್ರಮಗಳು ಮಿನ್ನೇಸೋಟದ ಜನರಿಗೆ ಹಾಗೂ ಸಹಾಯಧನದ ಮೇಲೆ ಅವಲಂಬಿತರಾದವರಿಗೆ ಹಾನಿ ಉಂಟುಮಾಡುತ್ತವೆ” ಎಂದು ಹೇಳಿದರು.
ಇನ್ನು ಮುಂದೆ ದೇಶಾದ್ಯಂತ ಯಾವುದೇ ರಾಜ್ಯಕ್ಕೆ ಹಣ ಬಿಡುಗಡೆ ಮಾಡುವ ಮುನ್ನ ಅಫಿಡವಿಟ್, ರಶೀದಿ ಹಾಗೂ ಫೋಟೋಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ ಎಂದು ಒ'ನೀಲ್ ಸ್ಪಷ್ಟಪಡಿಸಿದರು.
ಎಚ್ಎಚ್ಎಸ್ ಹಂಚಿಕೊಂಡಿರುವ ವೀಡಿಯೊದಲ್ಲಿ, ಮಕ್ಕಳ ಮತ್ತು ಕುಟುಂಬಗಳ ಆಡಳಿತದ ಮುಖ್ಯಸ್ಥ ಅಲೆಕ್ಸ್ ಆಡಮ್ಸ್, ವಾರ್ಷಿಕವಾಗಿ ಸುಮಾರು 185 ಮಿಲಿಯನ್ ಡಾಲರ್ (ಸುಮಾರು ರೂ. 1,661 ಕೋಟಿ) ಮಕ್ಕಳ ಆರೈಕೆ ನಿಧಿಯನ್ನು ಮಿನ್ನೇಸೋಟಕ್ಕೆ ನೀಡಲಾಗುತ್ತಿದ್ದು, ಇದರ ಮೂಲಕ ಕಡಿಮೆ ಆದಾಯದ ಸುಮಾರು 23,000 ಮಕ್ಕಳಿಗೆ ನೆರವು ದೊರೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa