
ಢಾಕಾ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ ಖಲೀದಾ ಜಿಯಾ ಅವರು ಇಂದು ಬೆಳಿಗ್ಗೆ 6 ಗಂಟೆಗೆ 80ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ವಿಚಾರವನ್ನು ಬಿಎನ್‌ಪಿ ಮಾಧ್ಯಮ ಕೋಶವು ತನ್ನ ಅಧಿಕೃತ ಫೇಸ್‌ಬುಕ್ ಪುಟದ ಮೂಲಕ ಪ್ರಕಟಿಸಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖಲೀದಾ ಜಿಯಾ ಅವರನ್ನು ನವೆಂಬರ್ 23ರಂದು ರಾಜಧಾನಿ ಢಾಕಾದ ಎವರ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಚಿಕಿತ್ಸೆಗೆ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದ್ದು, ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಬಿಎನ್‌ಪಿ ಸ್ಥಾಯಿ ಸಮಿತಿಯ ಸದಸ್ಯ ಹಾಗೂ ವೈದ್ಯಕೀಯ ಮಂಡಳಿಯ ಸದಸ್ಯರಾದ ಎಝಡ್‌ಎಂ ಜಾಹಿದ್ ಹೊಸೇನ್ ಅವರು ಮಂಗಳವಾರ ಬೆಳಗಿನ ಜಾವ 2.15ರ ಸುಮಾರಿಗೆ, “ಮಾಜಿ ಪ್ರಧಾನಿ ಬಹಳ ನಿರ್ಣಾಯಕ ಹಂತವನ್ನು ಎದುರಿಸುತ್ತಿದ್ದಾರೆ” ಎಂದು ಪತ್ರಕರ್ತರಿಗೆ ತಿಳಿಸಿದ್ದರು.
ಖಲೀದಾ ಜಿಯಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದ ರಾಜಕೀಯ ವಲಯದಲ್ಲಿ ತೀವ್ರ ಶೋಕದ ಅಲೆ ಎದ್ದಿದೆ. ಬಿಎನ್‌ಪಿ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ದುಃಖ ವ್ಯಕ್ತಪಡಿಸಿದ್ದಾರೆ.
ಇತ್ತ, ಅವರ ಪುತ್ರ ಹಾಗೂ ಬಿಎನ್‌ಪಿ ಹಿರಿಯ ನಾಯಕ ತಾರಿಕ್ ರೆಹಮಾನ್ ಇತ್ತೀಚೆಗೆ ಸುಮಾರು 17 ವರ್ಷಗಳ ಬಳಿಕ ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ಮರಳಿದ್ದರು ಎಂಬುದು ಗಮನಾರ್ಹ.
ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಖಲೀದಾ ಜಿಯಾ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಹಲವು ವರ್ಷಗಳ ಕಾಲ ದೇಶದ ರಾಜಕಾರಣದ ಮೇಲೆ ಪ್ರಭಾವ ಬೀರಿದ್ದರು. ಅವರ ನಿಧನವು ಬಾಂಗ್ಲಾದೇಶದ ರಾಜಕೀಯಕ್ಕೆ ಮಹತ್ವದ ನಷ್ಟವೆಂದು ವಿಶ್ಲೇಷಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa