
ಸಿಡ್ನಿ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಶಸ್ ಸರಣಿಯ ಕೊನೆಯ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತೊಂದು ಭಾರೀ ಹೊಡೆತ ಎದುರಾಗಿದೆ. ವೇಗದ ಬೌಲರ್ ಗಸ್ ಅಟ್ಕಿನ್ಸನ್ ಮಂಡಿರಜ್ಜು ಗಾಯದ ಕಾರಣದಿಂದ ಸಿಡ್ನಿ ಟೆಸ್ಟ್‌ನಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ.
ಮೆಲ್ಬೋರ್ನ್ ಟೆಸ್ಟ್‌ನ ಎರಡನೇ ದಿನದಂದು ಅಟ್ಕಿನ್ಸನ್ ಗಾಯಗೊಂಡಿದ್ದು, ನಂತರ ನಡೆಸಿದ ಸ್ಕ್ಯಾನ್‌ನಲ್ಲಿ ಅವರ ಎಡಗಾಲಿಗೆ ಗಾಯವಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಸೋಮವಾರ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಆಯ್ಕೆಯಾದ ಇಂಗ್ಲೆಂಡ್‌ನ ನಾಲ್ವರು ವೇಗದ ಬೌಲರ್‌ಗಳಲ್ಲಿ ಅಟ್ಕಿನ್ಸನ್ ಒಬ್ಬರಾಗಿದ್ದರು. ಬ್ರೈಡನ್ ಕಾರ್ಸ್, ಮಾರ್ಕ್ ವುಡ್, ಜೋಫ್ರಾ ಆರ್ಚರ್ ಹಾಗೂ ಅಟ್ಕಿನ್ಸನ್ ಮೂಲಕ ಆಸ್ಟ್ರೇಲಿಯಾ ಬ್ಯಾಟಿಂಗ್ ಲೈನಪ್‌ಗೆ ತೀವ್ರ ಸವಾಲು ಒಡ್ಡುವ ಯೋಜನೆ ಇಂಗ್ಲೆಂಡ್‌ಗಿತ್ತು. ಆದರೆ ಸರಣಿಯ ಆರಂಭದಿಂದಲೇ ಗಾಯಗಳು ಈ ಯೋಜನೆಯನ್ನು ಹಾಳುಮಾಡಿವೆ.
ಮೊಣಕಾಲಿನ ಸಮಸ್ಯೆಯಿಂದಾಗಿ ಮಾರ್ಕ್ ವುಡ್ ಪರ್ತ್ ಟೆಸ್ಟ್ ಬಳಿಕ ಹೊರಗುಳಿದರು. ಈ ವರ್ಷದ ಆರಂಭದಲ್ಲೇ ಅವರ ಎಡ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಅಡಿಲೇಡ್ ಟೆಸ್ಟ್ ಬಳಿಕ ಜೋಫ್ರಾ ಆರ್ಚರ್ ಕೂಡ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದು, ಇದು ಇಂಗ್ಲೆಂಡ್‌ಗೆ ದೊಡ್ಡ ನಿರಾಶೆಯಾಗಿ ಪರಿಣಮಿಸಿತು. ಆರ್ಚರ್ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.
ಗಸ್ ಅಟ್ಕಿನ್ಸನ್ ಗಾಯದಿಂದ ಹೊರಗುಳಿದ ಮೂರನೇ ವೇಗದ ಬೌಲರ್ ಆಗಿದ್ದಾರೆ. ಅಡಿಲೇಡ್ ಟೆಸ್ಟ್‌ಗೆ ಅವರನ್ನು ಕೈಬಿಡಲಾಗಿದ್ದರೂ, ಮೆಲ್ಬೋರ್ನ್‌ನಲ್ಲಿ ಆರ್ಚರ್ ಬದಲಿಗೆ ತಂಡಕ್ಕೆ ಮರಳಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಟ್ಕಿನ್ಸನ್ 47.33 ಸರಾಸರಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದು, ಬ್ರಿಸ್ಬೇನ್ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಶೇನ್ ಅವರ ವಿಕೆಟ್‌ಗಳು ಪ್ರಮುಖ ಸಾಧನೆಗಳಾಗಿವೆ.
ಈ ಹಿನ್ನಲೆಯಲ್ಲಿ, ಬ್ರೈಡನ್ ಕಾರ್ಸ್ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಗ್ಲೆಂಡ್‌ಗೆ ಲಭ್ಯವಿರುವ ಏಕೈಕ ವೇಗದ ಬೌಲರ್ ಆಗಿದ್ದಾರೆ. ಮೊದಲ ಮೂರು ಟೆಸ್ಟ್‌ಗಳಲ್ಲಿ ನಿರೀಕ್ಷಿತ ಪರಿಣಾಮ ಬೀರದ ಕಾರ್ಸ್, ಮೆಲ್ಬೋರ್ನ್ ಟೆಸ್ಟ್‌ನ ಇಂಗ್ಲೆಂಡ್ ಗೆಲುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಸಿಡ್ನಿ ಟೆಸ್ಟ್‌ನಲ್ಲಿ ಅಟ್ಕಿನ್ಸನ್ ಬದಲಿಗೆ ಮ್ಯಾಥ್ಯೂ ಪಾಟ್ಸ್ ಆಡುವ ಸಾಧ್ಯತೆ ಹೆಚ್ಚಿದ್ದು, ಇದು ಸುಮಾರು ಒಂದು ವರ್ಷದ ಬಳಿಕ ಅವರ ಮೊದಲ ಟೆಸ್ಟ್ ಪಂದ್ಯವಾಗಲಿದೆ. ಮೆಲ್ಬೋರ್ನ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಜೋಶ್ ಟಂಗ್, ಕಾರ್ಸ್ ಜೊತೆಗೆ ಹೊಸ ಚೆಂಡನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
ನಾಯಕ ಬೆನ್ ಸ್ಟೋಕ್ಸ್ ತಮ್ಮ ಪ್ರಮುಖ ಆಲ್‌ರೌಂಡರ್ ಪಾತ್ರದಲ್ಲಿ ತಂಡದೊಂದಿಗೆ ಮುಂದುವರಿಯಲಿದ್ದು, ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಕೂಡ ಆಯ್ಕೆಗಾಗಿ ಲಭ್ಯವಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa