ಅರಾವಳಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿಗೆ ಜೈರಾಮ್ ರಮೇಶ್ ಸ್ವಾಗತ
ಪರಿಸರ ಸಚಿವ ಭೂಪೇಂದ್ರ ಯಾದವ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
Jairam ramesh


ನವದೆಹಲಿ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅರಾವಳಿ ಬೆಟ್ಟಗಳು ಮತ್ತು ಅರಾವಳಿ ಪರ್ವತ ಶ್ರೇಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನದೇ ಆದ ಹಿಂದಿನ ಆದೇಶವನ್ನು ಸ್ಥಗಿತಗೊಳಿಸಿರುವ ನಿರ್ಧಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೋಮವಾರ ಸ್ವಾಗತಿಸಿದ್ದಾರೆ. ಈ ನಿರ್ಧಾರವನ್ನು ಕಾಂಗ್ರೆಸ್‌ಗೆ ದೊರೆತ ಜಯವೆಂದು ಅವರು ವರ್ಣಿಸಿದ್ದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್, ಸುಪ್ರೀಂ ಕೋರ್ಟ್ ಅಂತಿಮವಾಗಿ ಸತ್ಯವನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು. ಅರಾವಳಿ ವಿಚಾರದಲ್ಲಿ ತಾವು ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜಕೀಯ ಮಾಡುತ್ತಿದ್ದಾರೆ ಎಂಬ ಕೇಂದ್ರ ಸಚಿವರ ಆರೋಪ ಇದೀಗ ತಪ್ಪು ಎಂದು ಸಾಬೀತಾಗಿದೆ ಎಂದು ಅವರು ಹೇಳಿದರು.

ಅರಾವಳಿ ಪರ್ವತ ಶ್ರೇಣಿ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಿಗೆ ಮಾತ್ರವಲ್ಲದೆ ಇಡೀ ದೇಶದ ಪರಿಸರ ಸಮತೋಲನಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟರು. ಆದರೆ ಭಾರತೀಯ ಜನತಾ ಪಕ್ಷವು ಅರಾವಳಿಯನ್ನು ರಕ್ಷಿಸುವ ಬದಲು ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮನಸ್ಥಿತಿ ಹೊಂದಿದೆ ಎಂದು ಅವರು ಆರೋಪಿಸಿದರು.

ಅರಾವಳಿ ಪ್ರದೇಶದಲ್ಲಿ ಹಸಿರನ್ನು ಪುನಃಸ್ಥಾಪಿಸುವುದು ಮಾನವ ಜೀವನ ಮತ್ತು ಪರಿಸರದ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದರು. ಇಂತಹ ಮಹತ್ವದ ವಿಷಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರುವ ಹೊಣೆ ಹೊತ್ತು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್ ನವೆಂಬರ್ 20 ರಂದು ಅರಾವಳಿ ಶ್ರೇಣಿಗೆ ಸಂಬಂಧಿಸಿದ ತನ್ನದೇ ಆದ ಆದೇಶವನ್ನು ಅಮಾನತುಗೊಳಿಸಿ, ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮತ್ತು ಪರಿಶೀಲನೆಯ ಅಗತ್ಯವಿದೆ ಎಂದು ಹೇಳಿತ್ತು. ದೆಹಲಿ–ಎನ್‌ಸಿಆರ್ ಸೇರಿದಂತೆ ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಪರಿಸರ ಸಮತೋಲನದಲ್ಲಿ ಅರಾವಳಿ ಶ್ರೇಣಿ ಪ್ರಮುಖ ಪಾತ್ರ ವಹಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande