
ಮ್ಯಾಂಚೆಸ್ಟರ್, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವರ್ಷದ ಏಕೈಕ ಬಾಕ್ಸಿಂಗ್ ಡೇ ಪುಟ್ಬಾಲ್ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ನ್ಯೂಕ್ಯಾಸಲ್ ಯುನೈಟೆಡ್ ವಿರುದ್ಧ 1-0 ಗೋಲುಗಳ ಅಂತರದ ಮಹತ್ವದ ಜಯ ಸಾಧಿಸಿ, ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಮೊದಲಾರ್ಧದಲ್ಲಿ ಪ್ಯಾಟ್ರಿಕ್ ಡೋರ್ಗು ಗಳಿಸಿದ ನಿರ್ಣಾಯಕ ಗೋಲು ಯುನೈಟೆಡ್ ಗೆಲುವಿಗೆ ಕಾರಣವಾಯಿತು.
ರೂಬೆನ್ ಅಮೋರಿಮ್ ಮಾರ್ಗದರ್ಶನದಡಿಯಲ್ಲಿ ಆಡಿದ ಯುನೈಟೆಡ್, ಈ ಗೆಲುವಿನೊಂದಿಗೆ 18 ಪಂದ್ಯಗಳಿಂದ 29 ಅಂಕಗಳನ್ನು ಕಲೆಹಾಕಿದೆ. ಇನ್ನೊಂದೆಡೆ, ನ್ಯೂಕ್ಯಾಸಲ್ ಯುನೈಟೆಡ್ 23 ಅಂಕಗಳೊಂದಿಗೆ 11ನೇ ಸ್ಥಾನದಲ್ಲೇ ಉಳಿದಿದೆ. ಲೀಗ್‌ನ ಉಳಿದ ಪಂದ್ಯಗಳು ಶನಿವಾರ ಮತ್ತು ಭಾನುವಾರ ನಡೆಯಲಿವೆ.
ಪಂದ್ಯದ ಏಕೈಕ ಗೋಲು 24ನೇ ನಿಮಿಷದಲ್ಲಿ ದಾಖಲಾಗಿತು. ಡಿಯೋಗೊ ಡಾಲೋಟ್ ಅವರ ಲಾಂಗ್ ಥ್ರೋ ಅನ್ನು ನ್ಯೂಕ್ಯಾಸಲ್ ರಕ್ಷಣಾಪಡೆ ಸಮರ್ಪಕವಾಗಿ ತೆರವುಗೊಳಿಸಲು ವಿಫಲವಾದ ಪರಿಣಾಮ ಚೆಂಡು ಪ್ಯಾಟ್ರಿಕ್ ಡೋರ್ಗು ಅವರ ಕಾಲಿಗೆ ಬಿತ್ತು. ಡ್ಯಾನಿಶ್ ಆಟಗಾರ 15 ಗಜ ದೂರದಿಂದ ಗೋಲಿನ ಕೆಳ ಎಡ ಮೂಲೆಗೆ ಶಕ್ತಿಯುತ ವಾಲಿಯನ್ನು ಹೊಡೆದು ಚೆಂಡನ್ನು ಜಾಲದೊಳಗೆ ಸೇರಿಸಿದರು. ಇದು ಮ್ಯಾಂಚೆಸ್ಟರ್ ಯುನೈಟೆಡ್ ಪರ ಡೋರ್ಗು ಅವರ ಮೊದಲ ಗೋಲು ಆಗಿದೆ.
ದ್ವಿತೀಯಾರ್ಧದಲ್ಲಿ, ವಿಶೇಷವಾಗಿ ಅಂತಿಮ ಕ್ಷಣಗಳಲ್ಲಿ, ನ್ಯೂಕ್ಯಾಸಲ್ ತಂಡ ಸಮಬಲ ಸಾಧಿಸಲು ತೀವ್ರ ಒತ್ತಡ ಹೇರಿದರೂ, ಯುನೈಟೆಡ್‌ನ ಸಂಘಟಿತ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಗಮನಾರ್ಹವಾಗಿ, ಈ ಪಂದ್ಯಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ಪ್ರಮುಖ ಆಟಗಾರರ ಕೊರತೆಯನ್ನು ಎದುರಿಸಬೇಕಾಯಿತು. ನಾಯಕ ಬ್ರೂನೋ ಫೆರ್ನಾಂಡಿಸ್ ಗಾಯದ ಕಾರಣದಿಂದ ಹೊರಗುಳಿದರೆ, ಬ್ರಿಯಾನ್ ಎಂಬೆಮೊ ಮತ್ತು ಅಮದ್ ಡಿಯಲ್ಲೊ ಆಫ್ರಿಕಾ ಕಪ್ ಆಫ್ ನೇಷನ್ಸ್‌ನಲ್ಲಿ ಭಾಗವಹಿಸುತ್ತಿದ್ದರು.
ಕಳೆದ 43 ವರ್ಷಗಳಲ್ಲಿ ಬಾಕ್ಸಿಂಗ್ ಡೇ ದಿನದಂದು ನಡೆದ ಅತ್ಯಂತ ಕಡಿಮೆ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲೊಂದು ಇದಾಗಿತ್ತು. ಸಾಮಾನ್ಯವಾಗಿ ಹಲವು ಪ್ರಮುಖ ಪಂದ್ಯಗಳಿಗೆ ಸಾಕ್ಷಿಯಾಗುವ ಬಾಕ್ಸಿಂಗ್ ಡೇ ಈ ಬಾರಿ ಸಂಪ್ರದಾಯವನ್ನು ಮುರಿದು ಕೇವಲ ಒಂದೇ ಉನ್ನತ ಮಟ್ಟದ ಪಂದ್ಯಕ್ಕೆ ಸೀಮಿತವಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa