
ಢಾಕಾ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಾಂಗ್ಲಾದೇಶದಲ್ಲಿ ರಾಜಕೀಯ ಚಟುವಟಿಕೆ ಮತ್ತಷ್ಟು ತೀವ್ರಗೊಂಡಿರುವ ನಡುವೆ, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಇಂದು ತಮ್ಮ ತಂದೆ, ದಿವಂಗತ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಲಂಡನ್‌ನಿಂದ ತಾಯ್ನಾಡಿಗೆ ಹಿಂತಿರುಗಿ ಸುಮಾರು 24 ಗಂಟೆಗಳಾದ ಬಳಿಕ ತಾರಿಕ್ ತಮ್ಮ ಮೊದಲ ಸಾರ್ವಜನಿಕ ಚಟುವಟಿಕೆಯಲ್ಲಿ ಭಾಗವಹಿಸಲಿದ್ದು, ಸುಮಾರು 17 ವರ್ಷಗಳ ನಂತರ ಅವರ ಮರಳುವಿಕೆ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಮತ್ತು ಚಲನವಲನಕ್ಕೆ ಕಾರಣವಾಗಿದೆ. ಮಧ್ಯಂತರ ಸರ್ಕಾರ ಹಾಗೂ ಸಾಮಾನ್ಯ ನಾಗರಿಕರು ತಾರಿಕ್ ರೆಹಮಾನ್ ಅವರಿಗೆ ಆತ್ಮೀಯ ಸ್ವಾಗತ ನೀಡಿದ ರೀತಿಗೆ ಬಿಎನ್‌ಪಿ ಸಂತೋಷ ವ್ಯಕ್ತಪಡಿಸಿದೆ.
ಢಾಕಾ ಟ್ರಿಬ್ಯೂನ್ ವರದಿ ಪ್ರಕಾರ, ಶುಕ್ರವಾರದ ಜುಮಾ ಪ್ರಾರ್ಥನೆಯ ನಂತರ ತಾರಿಕ್ ರೆಹಮಾನ್ ಶೇರ್-ಎ-ಬಾಂಗ್ಲಾ ನಗರದಲ್ಲಿರುವ ಜಿಯಾವುರ್ ರೆಹಮಾನ್ ಅವರ ಸಮಾಧಿಗೆ ಭೇಟಿ ನೀಡಲಿದ್ದಾರೆ. ಬಳಿಕ ಅವರು ಸವರ್‌ನಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಿ ವಿಮೋಚನಾ ಯುದ್ಧದ ಹುತಾತ್ಮರಿಗೆ ಗೌರವ ಸಲ್ಲಿಸಲಿದ್ದಾರೆ.
ಗುಲ್ಶನ್‌ನಲ್ಲಿರುವ ಬಿಎನ್‌ಪಿ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ತಾರಿಕ್ ಅವರ ಮುಂದಿನ ಮೂರು ದಿನಗಳ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ. ಬಿಎನ್‌ಪಿ ಸ್ಥಾಯಿ ಸಮಿತಿ ಸದಸ್ಯ ಸಲಾಹುದ್ದೀನ್ ಅಹ್ಮದ್ ಅವರು, ಡಿಸೆಂಬರ್ 26ರಂದು ಸವರ್‌ಗೆ ಭೇಟಿ ನೀಡುವ ಕಾರ್ಯಕ್ರಮ ನಿಶ್ಚಿತವಾಗಿದೆ ಎಂದು ತಿಳಿಸಿದ್ದಾರೆ.
ತಾರಿಕ್ ರೆಹಮಾನ್ ಅವರ ಭೇಟಿಯ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮಧ್ಯಂತರ ಸರ್ಕಾರ ಎರಡು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಅಗತ್ಯವಿದ್ದರೆ ಬಹು ಹಂತದ ಭದ್ರತೆ ಒದಗಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹುತಾತ್ಮರ ಸ್ಮಾರಕದ ಸುತ್ತಲೂ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸ್ಮಾರಕದ ಉಸ್ತುವಾರಿ ಅನ್ವರ್ ಹುಸೇನ್ ಖಾನ್ ಅನು ಮಾತನಾಡಿ, “ಇಡೀ ಸಂಕೀರ್ಣವನ್ನು ಸ್ವಚ್ಛಗೊಳಿಸಲಾಗಿದ್ದು, ಸರೋವರಗಳ ಶುದ್ಧೀಕರಣವೂ ಮಾಡಲಾಗಿದೆ” ಎಂದರು.
ಗೃಹ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಮೊಹಮ್ಮದ್ ಜಹಾಂಗೀರ್ ಆಲಂ ಚೌಧರಿ, ತಾರಿಕ್ ರೆಹಮಾನ್ ಅವರಿಗೆ ಅತ್ಯುನ್ನತ ಮಟ್ಟದ ಭದ್ರತೆ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಜೊತೆಗೆ, ಬಿಎನ್‌ಪಿ ತನ್ನದೇ ಆದ ಭದ್ರತಾ ವ್ಯವಸ್ಥೆಯನ್ನು ಕೂಡಾ ಜಾರಿಗೊಳಿಸಿದೆ. ಅಧ್ಯಕ್ಷ ಭದ್ರತಾ ಪಡೆ (ಸಿಎಸ್‌ಎಫ್) ತಾರಿಕ್ ಅವರ ವೈಯಕ್ತಿಕ ಭದ್ರತೆಯ ಹೊಣೆ ಹೊತ್ತಿದೆ.
ತಾರಿಕ್ ರೆಹಮಾನ್ ಮತ್ತು ಅವರ ಕುಟುಂಬ ಗುಲ್ಶನ್ ಅವೆನ್ಯೂನ ಮನೆ ಸಂಖ್ಯೆ 196ರಲ್ಲಿ ವಾಸಿಸುತ್ತಿದ್ದು, ಸಮೀಪದಲ್ಲೇ ಇರುವ ‘ಟರ್ಕೋಯಿಸ್’ ನಿವಾಸದಲ್ಲಿ ಅವರ ತಾಯಿ ಖಲೀದಾ ಜಿಯಾ ವಾಸಿಸುತ್ತಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಖಲೀದಾ ಜಿಯಾ ಪ್ರಸ್ತುತ ರಾಜಧಾನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2007ರ ರಾಜಕೀಯ ಬದಲಾವಣೆಗಳ ಬಳಿಕ ತಾರಿಕ್ ರೆಹಮಾನ್ ಬಂಧನಕ್ಕೊಳಗಾಗಿದ್ದರು. 2008ರಲ್ಲಿ ಚಿಕಿತ್ಸೆಗೆಂದು ಲಂಡನ್‌ಗೆ ತೆರಳಿದ ಅವರು, 2024ರ ರಾಜಕೀಯ ಬದಲಾವಣೆಗಳ ಬಳಿಕ ಬಾಂಗ್ಲಾದೇಶಕ್ಕೆ ಮರಳುವ ಅವಕಾಶ ಪಡೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa