
ನವದೆಹಲಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇಂದು ಭಾರತೀಯ ಕ್ರೀಡಾಪಟುಗಳು ನಿರಂತರವಾಗಿ ದಾಖಲೆಗಳನ್ನು ಮುರಿಯುತ್ತಾ ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಭಾರತಕ್ಕೆ ಹೊಸ ಗುರುತನ್ನು ತಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕ್ರೀಡೆ ಇಂದು ಕೇವಲ ಸ್ಪರ್ಧೆಯ ಮಾಧ್ಯಮವಲ್ಲ, ಬದಲಾಗಿ ರಾಷ್ಟ್ರಗೌರವ ಹಾಗೂ ಯುವ ಸಶಕ್ತೀಕರಣದ ಶಕ್ತಿಶಾಲಿ ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು.
ದೇಶಾದ್ಯಂತ ನಡೆದ ಸಂಸದ್ ಕ್ರೀಡಾ ಮಹೋತ್ಸವದ ಸಮಾರೋಪ ಸಮಾರಂಭವನ್ನು ಪ್ರಧಾನಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದರು. ಹಿಂದೆ ಕ್ರೀಡೆಯನ್ನು ಸಮಯ ವ್ಯರ್ಥ ಎಂದು ಕಾಣಲಾಗುತ್ತಿತ್ತು. ಆದರೆ ಈಗ ಕ್ರೀಡೆಯಿಂದ ವೈಯಕ್ತಿಕ ಬೆಳವಣಿಗೆಯಷ್ಟೇ ಅಲ್ಲ, ಸಮಾಜದ ಭವಿಷ್ಯವೂ ರೂಪುಗೊಳ್ಳುತ್ತದೆ ಎಂಬ ಅರಿವು ಜನರಲ್ಲಿ ಮೂಡಿದೆ ಎಂದರು. ಇಂದಿನ ಪಾರದರ್ಶಕ ವ್ಯವಸ್ಥೆಯಲ್ಲಿ ಪ್ರತಿಭೆ ಮತ್ತು ಪರಿಶ್ರಮವೇ ಯಶಸ್ಸಿನ ಮೂಲವಾಗಿವೆ ಕ್ರೀಡಾ ಕ್ಷೇತ್ರದಲ್ಲಿ ಅವಕಾಶಗಳು ಅಸೀಮವಾಗಿವೆ ಎಂದು ಪ್ರಧಾನಿ ಹೇಳಿದರು.
2014ರ ಮೊದಲು ದೇಶದ ಕ್ರೀಡಾ ಬಜೆಟ್ 12 ಸಾವಿರ ಕೋಟಿ ರೂ.ಗಿಂತ ಕಡಿಮೆ ಇತ್ತು. ಆದರೆ ಇಂದು ಅದು 30 ಸಾವಿರ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಮೋದಿ ಮಾಹಿತಿ ನೀಡಿದರು.
ಟಾಪ್ಸ್ ಯೋಜನೆಯಡಿ ಕ್ರೀಡಾಪಟುಗಳಿಗೆ 25 ಸಾವಿರದಿಂದ 50 ಸಾವಿರ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದು ಹೊಸ ಪ್ರತಿಭೆಗಳಿಗೆ ಮುನ್ನುಗ್ಗಲು ನೆರವಾಗುತ್ತಿದೆ ಎಂದು ಹೇಳಿದರು.
2030ರಲ್ಲಿ ಅಹಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಯಿಂದ ವಿಶ್ವದ ಗಮನ ಭಾರತದತ್ತ ಸೆಳೆಯಲಿದೆ. ಜೊತೆಗೆ 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಭಾರತ ಪ್ರಯತ್ನಿಸುತ್ತಿದೆ ಎಂದರು.
ಮಕ್ಕಳ ಪೋಷಕರು ಮಕ್ಕಳನ್ನು ಆಟಕ್ಕೆ ಪ್ರೇರೇಪಿಸಬೇಕು ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮನಸ್ಸಿಗೆ ಕ್ರೀಡೆ ಅಡಿಪಾಯವಾಗಿದೆ ಎಂದು ಪ್ರಧಾನಿ ಮನವಿ ಮಾಡಿದರು.
ಸಂಸದ್ ಕ್ರೀಡಾ ಮಹೋತ್ಸವವನ್ನು ಜನಾಂದೋಲನವೆಂದು ವರ್ಣಿಸಿದ ಮೋದಿ, ದೇಶಾದ್ಯಂತ 290ಕ್ಕೂ ಹೆಚ್ಚು ಸಂಸದರು ಈ ಮಹೋತ್ಸವ ಆಯೋಜಿಸಿದ್ದು, ಒಂದು ಕೋಟಿಗೂ ಹೆಚ್ಚು ಯುವ ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಗರಗಳಿಂದ ಗ್ರಾಮಗಳವರೆಗೆ ಯುವಕರ ಭಾಗವಹಿಸುವಿಕೆ ಇದರ ವ್ಯಾಪಕ ಪರಿಣಾಮವನ್ನು ತೋರಿಸುತ್ತದೆ. ದಿವ್ಯಾಂಗ ಕ್ರೀಡಾಪಟುಗಳು ಹೊಸ ಎತ್ತರಗಳನ್ನು ತಲುಪುತ್ತಿದ್ದಾರೆ; ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಧೈರ್ಯವಾಗಿ ಮುಂದುವರಿಯುತ್ತಿದ್ದಾರೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa