
ಬಳ್ಳಾರಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪೋಲಿಯೋ ವೈರಸ್‍ನಿಂದ ಜೀವನ ಪರ್ಯಂತ ಅಂಗವಿಲಕತೆ ಉಂಟು ಮಾಡುವುದನ್ನು ತಡೆಯಲು ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಮತ್ತೆ ಈಗಲು ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆಯುತ್ತಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡುವ ಮೂಲಕ ಕಾರ್ಯಕ್ರಮ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಆರೋಗ್ಯ ಕಾರ್ಯಕರ್ತರು, ಪೋಷಕರು ಯಾವ ಮಗುವು ಪೋಲಿಯೋ ಹನಿಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪೋಲಿಯೋ ವೈರಸ್ ಅನ್ನು ತಡೆಗಟ್ಟಲು ನವಜಾತ ಶಿಶುವಿನಿಂದ 5 ವರ್ಷದ ಒಳಗಿನ ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯನ್ನು ದೇಶದಲ್ಲೆಡೆ 5 ವರ್ಷದ ಒಳಗಿನ ಪ್ರತಿ ಮಗುವಿಗೂ ಒಂದೇ ದಿನ ಒಂದೆ ಬಾರಿಗೆ ಹಾಕುವುದರಿಂದ ಪೋಲಿಯೋ ರೋಗಾಣುವನ್ನು ನಾಶ ಮಾಡಲು ಸಹಕಾರಿಯಾಗುತ್ತದೆ. ಹಾಗಾಗಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಲು ವಿನಂತಿಸಿದರು.
1994 ರಿಂದ ಅಭಿಯಾನದ ರೂಪದಲ್ಲಿ ಪೋಲಿಯೋ ಲಸಿಕೆ ಹಾಕುವ ಕಾರ್ಯವನ್ನು ಕೈಗೊಂಡು ನಮ್ಮ ದೇಶದಲ್ಲಿ ಕಳೆದ 14 ವರ್ಷಗಳಿಂದ ಯಾವುದೇ ಪ್ರಕರಣ ವರದಿಯಾಗದಂತೆ ಸರ್ಕಾರವು ಲಸಿಕೆ ಹಾಕುವ ಕಾರ್ಯ ಮಾಡುತ್ತಿದ್ದು, ಸಾರ್ವಜನಿಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆಗಳನ್ನು ಹಾಕಿಸಲು ಕೋರಿದರು.
ಇತ್ತೀಚಿನ ವರ್ಷಗಳಲ್ಲಿ ಲಸಿಕೆಗಳಿಂದಾಗಿ, ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಯುವ ಕಾರ್ಯವನ್ನು ಸರ್ಕಾರ ಮಾಡುತ್ತಿದ್ದು, ಜನತೆ ಲಸಿಕೆಗಳ ಬಗ್ಗೆ ಯಾವುದೇ ಸಂಶಯ ವ್ಯಕ್ತಪಡಿಸದೇ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲಾ ಲಸಿಕೆಗಳನ್ನು ಹಾಕಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಆಶಾಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್