ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿ ಸೀನ್ ಅಬಾಟ್
ಸಿಡ್ನಿ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅನುಭವಿ ಸಿಡ್ನಿ ಸಿಕ್ಸರ್ಸ್ ವೇಗದ ಬೌಲರ್ ಸೀನ್ ಅಬಾಟ್ ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡು ಬಾಕ್ಸಿಂಗ್ ದಿನದಂದು ನಡೆಯುವ ಬಿಗ್ ಬ್ಯಾಷ್ ಲೀಗ್ ಪಂದ್ಯಕ್ಕೆ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್ ಆರಂಭದಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯದ
Abat


ಸಿಡ್ನಿ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅನುಭವಿ ಸಿಡ್ನಿ ಸಿಕ್ಸರ್ಸ್ ವೇಗದ ಬೌಲರ್ ಸೀನ್ ಅಬಾಟ್ ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡು ಬಾಕ್ಸಿಂಗ್ ದಿನದಂದು ನಡೆಯುವ ಬಿಗ್ ಬ್ಯಾಷ್ ಲೀಗ್ ಪಂದ್ಯಕ್ಕೆ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ನವೆಂಬರ್ ಆರಂಭದಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಗಾಯಗೊಂಡಿದ್ದ 33 ವರ್ಷದ ಅಬಾಟ್, ಕಳೆದ ಆರು ವಾರಗಳನ್ನು “ನಿರಾಶಾದಾಯಕ”ವೆಂದು ವರ್ಣಿಸಿದ್ದು, ಇದೀಗ ಸಂಪೂರ್ಣ ಫಿಟ್ ಆಗುವ ಹಂತದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಗಾಯದ ಕಾರಣ ಅವರು ಆಶಸ್ ಸರಣಿಯ ಆರಂಭದಿಂದ ದೂರ ಉಳಿಯಬೇಕಾಯಿತು. ಗಾಯಕ್ಕೆ ಮುನ್ನ ವಿಕ್ಟೋರಿಯಾ ವಿರುದ್ಧ ನ್ಯೂ ಸೌತ್ ವೇಲ್ಸ್ ಪರ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.

ಅದೇ ಅವಧಿಯಲ್ಲಿ ಆಸ್ಟ್ರೇಲಿಯಾದ ಹಿರಿಯ ವೇಗಿ ಜೋಶ್ ಹ್ಯಾಜಲ್‌ವುಡ್ ಕೂಡ ಮಂಡಿರಜ್ಜು ಗಾಯದಿಂದ ಬಳಲಿದ್ದು, ಅವರ ಆಶಸ್ ಅಭಿಯಾನ ಮುಕ್ತಾಯಗೊಂಡಿತ್ತು. ಹ್ಯಾಜಲ್‌ವುಡ್ ಜೊತೆ ಅಬಾಟ್, ಎಸ್‌ಸಿಜಿ ಮತ್ತು ಕ್ರಿಕೆಟ್ ನ್ಯೂ ಸೌತ್ ವೇಲ್ಸ್‌ನ ಸಿಲ್ವರ್‌ವಾಟರ್ ತರಬೇತಿ ಕೇಂದ್ರದಲ್ಲಿ ಪುನರ್ವಸತಿ ಪೂರ್ಣಗೊಳಿಸಿದ್ದಾರೆ.

ಸಿಡ್ನಿ ಥಂಡರ್ ವಿರುದ್ಧ ಸಿಕ್ಸರ್ಸ್ 47 ರನ್‌ಗಳ ಗೆಲುವಿನ ಬಳಿಕ ಫಾಕ್ಸ್ ಕ್ರಿಕೆಟ್‌ಗೆ ಮಾತನಾಡಿದ ಅಬಾಟ್,

“ಇನ್ನೂ ಕೆಲವು ಹಂತಗಳನ್ನು ಪೂರೈಸಬೇಕಿದೆ. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ವಾರ ಆಯ್ಕೆಗೆ ಲಭ್ಯವಾಗುತ್ತೇನೆ. ಇದು ನಿರಾಶಾದಾಯಕ ಸಮಯವಾಗಿದ್ದರೂ, ಉನ್ನತ ಮಟ್ಟದ ಕ್ರಿಕೆಟ್‌ನ ಭಾಗವೇ ಇದು. ಬಾಕ್ಸಿಂಗ್ ದಿನದಂದು ಆಡಲು ಆಶಿಸುತ್ತಿದ್ದೇನೆ” ಎಂದು ಹೇಳಿದರು.

ಸಿಕ್ಸರ್ಸ್ ತಂಡವು ಬಿಬಿಎಲ್ ಋತುವನ್ನು ಎರಡು ಸೋಲುಗಳೊಂದಿಗೆ ಆರಂಭಿಸಿದ್ದರೂ, ಥಂಡರ್ ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಬಾಕ್ಸಿಂಗ್ ದಿನದಂದು ಎಸ್‌ಸಿಜಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ ತಂಡದ ಮುಂದಿನ ಪಂದ್ಯ ನಡೆಯಲಿದೆ.

ಅಬಾಟ್ ಅವರ ಮರಳುವಿಕೆ ತಂಡಕ್ಕೆ ಮಹತ್ವದ ಬಲವಾಗಲಿದೆ ಎಂದು ಯುವ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande