
ಬಳ್ಳಾರಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿಯಲ್ಲಿ ಡಿಸೆಂಬರ್ 21 ರ ಭಾನುವಾರ ನಡೆದ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಬಳ್ಳಾರಿ, ಸಂಡೂರು, ಸಿರುಗುಪ್ಪ, ಕುರುಗೋಡು, ಕಂಪ್ಲಿ ತಾಲ್ಲೂಕಗಳಲ್ಲಿ ಬೂತ್ ದಿನದಂದು (ಡಿ.21) ಒಟ್ಟು 19,8,136 ಮಕ್ಕಳಲ್ಲಿ 19,1,995 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.96.9% ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ ರಮೇಶ್‍ಬಾಬು ಅವರು ತಿಳಿಸಿದ್ದಾರೆ.
ಉಳಿದಿರುವ 6,141 ಮಕ್ಕಳಿಗೆ ಡಿಸೆಂಬರ್ 24 ರವರೆಗೆ ನಡೆಯುವ ಲಸಿಕಾ ಅಭಿಯಾನದಲ್ಲಿ ತಪ್ಪದೇ ಲಸಿಕೆ ಹಾಕಲಾಗುವುದು. ಜಿಲ್ಲೆಯ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವ ದಿಶೆಯಲ್ಲಿ 376 ವಲಸೆ ಹಾಗೂ ಕ್ಲಿಷ್ಟಕರ ಪ್ರದೇಶಗಳನ್ನು ಗುರ್ತಿಸಲಾಗಿದ್ದು, ಅಂತಹ ಸ್ಥಳಗಳಲ್ಲಿ ಲಸಿಕೆ ಹಾಕಲು 267 ತಂಡಗಳನ್ನು ಸಿದ್ದಗೊಳಿಸಲಾಗಿತ್ತು. 920 ಬೂತ್‍ಗಳು 895 ಮನೆ ಬೇಟಿ ನೀಡುವ ತಂಡಗಳು ಹಾಗೂ ಸಂತೆ-ಮಾರುಕಟ್ಟೆ, ಬಸ್ ನಿಲ್ದಾಣ, ಮತ್ತು ಇತರೆ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಲಸಿಕೆ ಹಾಕಲು 49 ತಂಡಗಳು ಮತ್ತು ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ, ಕುರಿಹಟ್ಟಿ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 15 ಸಂಚಾರಿ ತಂಡಗಳ ಮೂಲಕ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನರ್ಸಿಂಗ್ ಕಾಲೇಜ್ ಹಾಗೂ ಸ್ವಯಂ ಸೇವಕರು ಪೋಲಿಯೋ ವ್ಯಾಕ್ಸಿನೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ 188 ಮೇಲ್ವಿಚಾರಕರು ಹಾಗೂ ಜಿಲ್ಲೆಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್