ಬಾಂಗ್ಲಾದೇಶ ಇಂಕ್ವಿಲಾಬ್ ಮಂಚ್ ನಾಯಕ ಹಾದಿ ನಿಧನ
ಢಾಕಾ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಕ್ವಿಲಾಬ್ ಮಂಚ್‌ನ ಸಂಚಾಲಕ ಶರೀಫ್ ಉಸ್ಮಾನ್ ಹಾದಿ ಅವರು ಗುರುವಾರ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾದರು. ಈ ಸುದ್ದಿ ಹೊರಬೀಳುತ್ತ
Haadi


ಢಾಕಾ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಕ್ವಿಲಾಬ್ ಮಂಚ್‌ನ ಸಂಚಾಲಕ ಶರೀಫ್ ಉಸ್ಮಾನ್ ಹಾದಿ ಅವರು ಗುರುವಾರ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾದರು. ಈ ಸುದ್ದಿ ಹೊರಬೀಳುತ್ತಿದ್ದಂತೆ, ಢಾಕಾದಲ್ಲಿ ತಡರಾತ್ರಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತು.

ಹಾದಿ ಅವರ ಸಾವಿನ ಸುದ್ದಿ ತಿಳಿದ ತಕ್ಷಣ, ಅವರ ಬೆಂಬಲಿಗರು ಬೀದಿಗಿಳಿದು ಬೆಂಕಿ ಹಚ್ಚುವಿಕೆ, ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದರು. ಪ್ರತಿಭಟನಾಕಾರರು ಅವಾಮಿ ಲೀಗ್‌ನ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಪ್ರಥಮ್ ಅಲೋ ಮತ್ತು ಡೈಲಿ ಸ್ಟಾರ್ ಸೇರಿದಂತೆ ಹಲವಾರು ಪತ್ರಿಕೆಗಳ ಕಚೇರಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.

ಇಂಕ್ವಿಲಾಬ್ ಮಂಚ್ ಸಂಚಾಲಕ ಶರೀಫ್ ಉಸ್ಮಾನ್ ಹಾದಿ ಅವರ ನಿಧನದ ಬಗ್ಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅದನ್ನು ಪ್ರಮುಖ ಮಾಧ್ಯಮ ಸಂಸ್ಥೆ ಪ್ರಥಮ್ ಅಲೋ ಉಲ್ಲೇಖಿಸಿದೆ.

ಡಿಸೆಂಬರ್ 12ರಂದು ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ, ಅಪರಿಚಿತ ದುಷ್ಕರ್ಮಿಗಳು ಹಾದಿ ಅವರ ತಲೆಗೆ ಗುಂಡು ಹಾರಿಸಿದ್ದರು. ಗಂಭೀರ ಸ್ಥಿತಿಯಲ್ಲಿ ಅವರನ್ನು ಢಾಕಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಡಿಸೆಂಬರ್ 15ರಂದು ಏರ್ ಆಂಬ್ಯುಲೆನ್ಸ್ ಮೂಲಕ ಸಿಂಗಾಪುರಕ್ಕೆ ಕಳುಹಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಕೊನೆಯುಸಿರೆಳೆದರು.

ಹಾದಿ ಅವರ ಸಾವಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಬೆಂಬಲಿಗರು, ವಿವಿಧ ಪ್ರದೇಶಗಳಲ್ಲಿ ಬೆಂಕಿ ಹಚ್ಚಿ, ಸಾರ್ವಜನಿಕ ಹಾಗೂ ರಾಜಕೀಯ ಕಚೇರಿಗಳನ್ನು ಧ್ವಂಸಗೊಳಿಸಿದರು. ಈ ವೇಳೆ ಶೇಖ್ ಹಸೀನಾ ಮತ್ತು ಭಾರತದ ವಿರುದ್ಧ ಘೋಷಣೆಗಳು ಮೊಳಗಿದವು.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, ಜನರು ಶಾಂತತೆ ಕಾಪಾಡಿಕೊಳ್ಳಬೇಕು ಹಾಗೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಶುಕ್ರವಾರವನ್ನು ರಾಷ್ಟ್ರೀಯ ಶೋಕಾಚರಣೆಯ ದಿನವಾಗಿ ಘೋಷಿಸಿದ ಅವರು, ಹಾದಿಯನ್ನು ನಿರ್ಭೀತ ಯೋಧ ಎಂದು ಕರೆದರು. ಹಾದಿಯ ಹಂತಕರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು. ಜೊತೆಗೆ, ಹಾದಿಯ ಪತ್ನಿ ಮತ್ತು ಏಕೈಕ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಜುಲೈ 2024ರಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ಹಾದಿ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರು. ಅವರು ಅವಾಮಿ ಲೀಗ್ ಅನ್ನು ಸಾಂವಿಧಾನಿಕವಾಗಿ ನಿಷೇಧಿಸಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಶೇಖ್ ಹಸೀನಾ ಅವರ ಕಟ್ಟಾ ವಿರೋಧಿಯಾಗಿದ್ದ ಹಾದಿ, ಭಾರತದ ವಿರುದ್ಧ ತೀಕ್ಷ್ಣ ಮತ್ತು ವಿವಾದಾತ್ಮಕ ಟೀಕೆಗಳಿಗಾಗಿ ಸಹ ಪ್ರಸಿದ್ಧರಾಗಿದ್ದರು.

ಮುಂಬರುವ ಚುನಾವಣೆಯಲ್ಲಿ ಅವರು ಢಾಕಾ–8 ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande