
ನವದೆಹಲಿ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ಹರಾಜು ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದೆ. ಫ್ರಾಂಚೈಸಿಗಳ ಮನವಿಯ ಮೇರೆಗೆ 19 ಹೆಚ್ಚುವರಿ ಆಟಗಾರರನ್ನು ಹರಾಜು ಪಟ್ಟಿಗೆ ಸೇರಿಸಲಾಗಿದ್ದು, ಇದರಿಂದ ಒಟ್ಟು ಆಟಗಾರರ ಸಂಖ್ಯೆ 369ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಪ್ರಕಟಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಇತ್ತೀಚಿನ ನವೀಕರಣದಲ್ಲಿ ಪ್ರಮುಖವಾಗಿ ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ ಹೆಸರು ಗಮನ ಸೆಳೆದಿದ್ದು, ಅವರು ಮೊದಲ ಬಾರಿಗೆ ಐಪಿಎಲ್ 2026ರ ಹರಾಜು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ತ್ರಿಪುರ ಆಲ್‌ರೌಂಡರ್ ಮಣಿಶಂಕರ್ ಮುರಸಿಂಘೆ, ಸ್ವಸ್ತಿಕ್ ಚಿಕಾರ ಮತ್ತು ದಕ್ಷಿಣ ಆಫ್ರಿಕಾದ ಎಥಾನ್ ಬಾಷ್ ಸೇರಿದಂತೆ ಒಂಬತ್ತು ಆಟಗಾರರನ್ನು ಹರಾಜು ಪಟ್ಟಿಗೆ ಸೇರಿಸಲಾಗಿತ್ತು. ಆದರೆ ನಂತರ ತಾಂತ್ರಿಕ ಕಾರಣಗಳಿಂದಾಗಿ ಈ ಹೆಸರುಗಳನ್ನು ತಾತ್ಕಾಲಿಕವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದೀಗ ನವೀಕರಿಸಿದ ಪಟ್ಟಿಯಲ್ಲಿ ಈ ಒಂಬತ್ತು ಆಟಗಾರರನ್ನು ಪುನಃ ಸೇರಿಸಲಾಗಿದೆ.
ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿರುವ ಐಪಿಎಲ್ 2026ರ ಹರಾಜಿಗೆ ಮುಂಚಿತವಾಗಿ ನಡೆದ ಈ ಪರಿಷ್ಕರಣೆ, ಫ್ರಾಂಚೈಸಿಗಳಿಗೆ ಆಟಗಾರರ ಆಯ್ಕೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದೆ. ಈ ಹೊಸ ಹೆಸರುಗಳ ಮೇಲೆ ಯಾವ ತಂಡಗಳು ಬಿಡ್ ಮಾಡಲಿವೆ ಎಂಬುದರ ಬಗ್ಗೆ ಈಗ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa