
ನವದೆಹಲಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷ ಭಾನುವಾರ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಭಾರಿ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾವು ಕಾಂಗ್ರೆಸ್ ಕಾರ್ಯಕರ್ತರಾಗಿ ಅಲ್ಲ, ಭಾರತೀಯ ಪ್ರಜಾಪ್ರಭುತ್ವದ ರಕ್ಷಕರಾಗಿ ಇಲ್ಲಿ ಸೇರಿದ್ದೇವೆ ಎಂದು ಹೇಳಿದ ಅವರು, ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಅದನ್ನು ಕಸಿಯುವ ಯಾವುದೇ ಪ್ರಯತ್ನವನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದರು.
ಬಿಜೆಪಿ ಸರ್ಕಾರವು ಮತದಾರರ ಪಟ್ಟಿಗಳ ದುರುಪಯೋಗ, ಸಂಸ್ಥೆಗಳ ಮೇಲೆ ಒತ್ತಡ ಹಾಗೂ ವ್ಯವಸ್ಥಿತ ಮತಗಳ್ಳತನದ ಮೂಲಕ ಜನಾದೇಶವನ್ನು ತಿರುಚುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಇದು ಕೇವಲ ದುರಾಡಳಿತವಲ್ಲ, ಭಾರತದ ಗಣರಾಜ್ಯಕ್ಕೆ ಎದುರಾದ ಗಂಭೀರ ಬೆದರಿಕೆ ಎಂದು ಹೇಳಿದರು. ಸರ್ವಾಧಿಕಾರವು ನಿಧಾನವಾಗಿ ಸಂಸ್ಥೆಗಳ ದುರ್ಬಳಕೆ ಮತ್ತು ಚುನಾವಣೆಗಳ ಕಳ್ಳತನದ ಮೂಲಕ ಹುಟ್ಟುತ್ತದೆ ಎಂಬ ಇತಿಹಾಸದ ಪಾಠವನ್ನು ಅವರು ಸ್ಮರಿಸಿದರು.
ಮತಗಳ್ಳತನದ ವಿರುದ್ಧ ಅಸಾಧಾರಣ ಧೈರ್ಯದಿಂದ ನಿಂತಿರುವ ನಾಯಕ ರಾಹುಲ್ ಗಾಂಧಿ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ಕರ್ನಾಟಕದ ಮಹದೇವಪುರ ಹಾಗೂ ಆಳಂದ ಕ್ಷೇತ್ರಗಳಲ್ಲಿ ನಡೆದ ಮತದಾರರ ಪಟ್ಟಿಗಳ ಅಕ್ರಮಗಳನ್ನು ಉದಾಹರಣೆಗಳಾಗಿ ಉಲ್ಲೇಖಿಸಿದರು. ಆಳಂದ ಪ್ರಕರಣದಲ್ಲಿ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಈ ಹೋರಾಟಕ್ಕೆ ಮಹತ್ವದ ಕಾನೂನು ಹೆಜ್ಜೆ ಎಂದು ಅವರು ಹೇಳಿದರು.
ಮತಗಳ್ಳತನವು ಕೇವಲ ಸಂಖ್ಯೆಗಳ ಪ್ರಶ್ನೆಯಲ್ಲ, ಅದು ಘನತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮೇಲಿನ ದಾಳಿ ಎಂದು ಸಿದ್ದರಾಮಯ್ಯ ತಿಳಿಸಿದರು. ಪಾರದರ್ಶಕ ಮತದಾರರ ಪಟ್ಟಿ, ಸ್ವತಂತ್ರ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಚುನಾವಣಾ ವ್ಯವಸ್ಥೆಗಾಗಿ ಜನಾಂದೋಲನ ಅಗತ್ಯವಿದೆ ಎಂದು ಕರೆ ನೀಡಿದ ಅವರು, “ಮತಗಳ್ಳತನದ ಮೂಲಕ ಫ್ಯಾಸಿಸಂ ಭಾರತವನ್ನು ಪ್ರವೇಶಿಸಲು ಬಿಡುವುದಿಲ್ಲ” ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa