
ಗದಗ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ–ಬೆಟಗೇರಿ ಅವಳಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ಪರದಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹದಗೆಟ್ಟ ರಸ್ತೆಗಳು, ಸಮರ್ಪಕ ಕುಡಿಯುವ ನೀರಿನ ಕೊರತೆ ಹಾಗೂ ಬೀದಿ ದೀಪಗಳು ಕಾರ್ಯನಿರ್ವಹಿಸದಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಅವ್ಯವಸ್ಥೆ ವಿರುದ್ಧ ನಿವಾಸಿಗಳು ಕ್ಷೇತ್ರದ ಶಾಸಕ ಹಾಗೂ ನಗರಸಭೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಳಿ ನಗರದ 35ನೇ ವಾರ್ಡ್‌ನ ಸಾಯಿ ಬಾಪೂಜಿ ನಗರದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಕೇವಲ ಆರು ತಿಂಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಡಾಂಬರ್ ರಸ್ತೆ ಈಗಾಗಲೇ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ. ರಸ್ತೆಯಲ್ಲಿ ಬೃಹತ್ ಆಕಾರದ ಹೊಂಡ ನಿರ್ಮಾಣವಾಗಿದ್ದು, ಅದರಲ್ಲಿ ಒಳಚರಂಡಿ ನೀರು ಶೇಖರಗೊಂಡಿದೆ. ಇದರಿಂದ ಕೆಟ್ಟ ದುರ್ವಾಸನೆ ವ್ಯಾಪಿಸಿದ್ದು, ಜನರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಇದೇ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸಂಚರಿಸುತ್ತಿದ್ದು, ಸ್ವಲ್ಪ ಅಲಕ್ಷ್ಯವಾದರೂ ಹೊಂಡಕ್ಕೆ ಬಿದ್ದು ಅಪಾಯ ಸಂಭವಿಸುವ ಭೀತಿ ಕಾಡುತ್ತಿದೆ. ಈ ಕುರಿತು ಗದಗ–ಬೆಟಗೇರಿ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದಲ್ಲದೆ, ಈ ಪ್ರದೇಶದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕೆಲ ಮನೆಗಳಿಗೆ ತುಂಗಭದ್ರಾ ನದಿ ನೀರಿನ ಸಂಪರ್ಕವೇ ಇಲ್ಲದಿರುವುದರಿಂದ ಫ್ಲೋರೈಡ್ ಮಿಶ್ರಿತ ನೀರನ್ನು ಸೇವಿಸುವ ಅನಿವಾರ್ಯತೆ ಎದುರಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಬೀದಿ ದೀಪಗಳ ಕಂಬಗಳು ಇದ್ದರೂ ಅವುಗಳಿಗೆ ಲೈಟ್‌ಗಳು ಬೆಳಗುತ್ತಿಲ್ಲ, ಪರಿಣಾಮ ರಾತ್ರಿ ಸಮಯದಲ್ಲಿ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಕೆಲವು ಭಾಗಗಳಲ್ಲಿ ಮಣ್ಣಿನ ರಸ್ತೆಗಳೇ ಉಳಿದಿದ್ದು, ಮಳೆಗಾಲದಲ್ಲಿ ಕೆಸರು ತುಂಬಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಗಮನಹರಿಸಿ, ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
“ನಾವು ಐಷಾರಾಮಿ ಸೌಕರ್ಯಗಳನ್ನು ಕೇಳುತ್ತಿಲ್ಲ, ಕನಿಷ್ಠ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು ಹಾಗೂ ಬೆಳಕು ಬೇಕು. ನಮ್ಮ ಗೋಳಿಗೆ ಯಾರೂ ಕಿವಿಗೊಡುತ್ತಿಲ್ಲ” ಎಂದು ಜನರು ಕಿಡಿಕಾರಿದ್ದಾರೆ. ಶೀಘ್ರದಲ್ಲೇ ಗದಗ–ಬೆಟಗೇರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಬೀದಿಗೆ ಇಳಿದು ಹೋರಾಟ ನಡೆಸುವುದಾಗಿ ಈ ಪ್ರದೇಶದ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP