ಖರೀದಿಯಾಗದ ಮೆಕ್ಕೆಜೋಳ, ರೈತರ ಆಕ್ರೋಶ
ಗದಗ, 14 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮೆಕ್ಕೆಜೋಳ ಬೆಳೆದು ಕಷ್ಟಪಡುವ ಅನ್ನದಾತರ ಗೋಳು ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರೈತರ ನಿರಂತರ ಹೋರಾಟಕ್ಕೆ ಬೆದರಿದ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದಾಗಿ ಗ್ರೀನ್ ಸಿಗ್ನಲ್ ನೀಡಿದರೂ, ಗದಗ ಜಿಲ್ಲೆಯಲ್ಲಿ ಸಮರ್ಪಕವಾಗಿ ಖರೀದಿ ಕೇಂದ್ರ
ಫೋಟೋ


ಗದಗ, 14 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮೆಕ್ಕೆಜೋಳ ಬೆಳೆದು ಕಷ್ಟಪಡುವ ಅನ್ನದಾತರ ಗೋಳು ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರೈತರ ನಿರಂತರ ಹೋರಾಟಕ್ಕೆ ಬೆದರಿದ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದಾಗಿ ಗ್ರೀನ್ ಸಿಗ್ನಲ್ ನೀಡಿದರೂ, ಗದಗ ಜಿಲ್ಲೆಯಲ್ಲಿ ಸಮರ್ಪಕವಾಗಿ ಖರೀದಿ ಕೇಂದ್ರಗಳು ಕಾರ್ಯಾರಂಭ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಜಿಲ್ಲೆಯಾದ್ಯಂತ ರೈತರ ಆಕ್ರೋಶ ತೀವ್ರಗೊಂಡಿದೆ.

ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದಾಗಿ ಘೋಷಿಸಿದರೂ, ವಾಸ್ತವದಲ್ಲಿ ರೈತರಿಂದ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅನ್ನದಾತರು ಆರೋಪಿಸಿದ್ದಾರೆ. ಪರಿಣಾಮವಾಗಿ ರೈತರು ಅನಿವಾರ್ಯವಾಗಿ ಕಡಿಮೆ ದರಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡುವ ದುಸ್ಥಿತಿಗೆ ತಲುಪಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ರೈತರು ಮೆಕ್ಕೆಜೋಳ ಬೆಳೆಸುತ್ತಿದ್ದು, ಆದರೂ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅನ್ನದಾತರು ನಿರಂತರ ಹೋರಾಟ ನಡೆಸಿದ್ದರು. ಅದರ ಫಲವಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎನ್ನಲಾದರೂ, ಜಿಲ್ಲೆಯಾದ್ಯಂತ ಕೇವಲ 1 ಸಾವಿರದಿಂದ 1,500 ಅರ್ಜಿಗಳನ್ನು ಮಾತ್ರ ಸ್ವೀಕರಿಸಿ, ಸರ್ವರ್ ಸಮಸ್ಯೆ ಹೇಳಿ ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಇದುವರೆಗೂ ಒಬ್ಬ ರೈತನಿಂದಲೂ ಒಂದು ಕ್ವಿಂಟಲ್ ಮೆಕ್ಕೆಜೋಳವೂ ಖರೀದಿ ಮಾಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಮೊದಲು ಸರ್ಕಾರ ಒಬ್ಬ ರೈತನಿಂದ 5 ಕ್ವಿಂಟಲ್ ಖರೀದಿ ಮಾಡುವುದಾಗಿ ಹೇಳಿದ್ದಾಗ ಉಗ್ರ ಹೋರಾಟ ನಡೆದಿತ್ತು. ಇದೀಗ ಸರ್ಕಾರ 50 ಕ್ವಿಂಟಲ್ ಖರೀದಿ ಮಾಡುತ್ತೇವೆ ಎಂದು ಘೋಷಣೆ ನೀಡಿದರೂ, ಅರ್ಜಿ ಸ್ವೀಕಾರ ಹಾಗೂ ಖರೀದಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರೈತರು ಓಪನ್ ಮಾರುಕಟ್ಟೆಯಲ್ಲಿ 1,500 ರಿಂದ 1,700 ರೂ. ದರಕ್ಕೆ ಮೆಕ್ಕೆಜೋಳ ಮಾರಾಟ ಮಾಡಲು ಮುಂದಾಗಿದ್ದಾರೆ.

ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಬಳಿಕವೇ ಖರೀದಿ ಕೇಂದ್ರಗಳು ಸಕ್ರಿಯವಾಗುತ್ತವೆ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಇದರಿಂದ ಅನ್ನದಾತರಿಗೆ ಮತ್ತಷ್ಟು ನಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ವೇಳೆ ರೈತರು ಹೋರಾಟ ನಡೆಸದಂತೆ ತಡೆಯುವ ಉದ್ದೇಶದಿಂದ ಖರೀದಿ ಕೇಂದ್ರ ತೆರೆಯುವ ಮೂಲಕ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 2,400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರವೂ ಖರೀದಿ ಆರಂಭಿಸುವುದಾಗಿ ತಿಳಿಸಿದೆ. ಆದರೂ ವಾಸ್ತವದಲ್ಲಿ ಖರೀದಿ ನಡೆಯುತ್ತಿಲ್ಲ. ಜಿಲ್ಲಾಧಿಕಾರಿಗಳನ್ನು ಕೇಳಿದರೆ “ಹಣವಿಲ್ಲ” ಎಂಬ ಉತ್ತರ ಸಿಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಇದರಿಂದ ಮೆಕ್ಕೆಜೋಳ ಬೆಳೆದ ರೈತರ ಬದುಕಿನೊಂದಿಗೆ ಸರ್ಕಾರ ಆಟವಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಶೀಘ್ರದಲ್ಲೇ ಸಮರ್ಪಕವಾಗಿ ಖರೀದಿ ಆರಂಭಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಅನ್ನದಾತರು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande