

ಬಳ್ಳಾರಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಜೀವನ ರೂಪಿಸಿಕೊಳ್ಳುವ ಶಿಲ್ಪಿಯಾಗಬೇಕು ಎಂದು ಬೆಂಗಳೂರು ಇಂಡಿಯಾ4ಐಎಎಸ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಸಿ. ಶ್ರೀನಿವಾಸ ಅವರು ಹೇಳಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳ ಪ್ಲೇಸ್‍ಮೆಂಟ್ ಸೆಲ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ‘ಉದ್ಯೋಗ ಮಹತ್ವ ಹಾಗೂ ಉದ್ಯೋಗ ಕೋಶದ ಅನುಷ್ಠಾನ’ದಲ್ಲಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೋಟ್ಯಾಂತರ ಉದ್ಯೋಗ ಆಕಾಂಕ್ಷಿಗಳು ಉದ್ಯೋಗಕ್ಕಾಗಿ ಹಾತೊರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡಿಗರೇ ಸ್ಥಾಪಿಸಿರುವ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಯಶಸ್ವಿಯಾಗುತ್ತಿದ್ದಾರೆ ಎಂದರು.
ನಿವೃತ್ತ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ, ಪ್ಲೇಸ್‍ಮೆಂಟ್ ಸೆಲ್‍ನ ರಾಜ್ಯ ನೋಡಲ್ ಅಧಿಕಾರಿ ಪ್ರೊ ಎ. ನಾರಾಯಣ ಪ್ರಸಾದ್ ಅವರು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆಯು ಹೆಚ್ಚಾಗುತ್ತಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ತೀರಾ ಕಡಿಮೆ ಎಂದರು.
ತಾತ್ಸಾರ, ಕೀಳರಿಮೆಯನ್ನು ತೆಗೆದು ಹಾಕುವ ಮೂಲಕ ನಿಮ್ಮಲ್ಲಿರುವ ನೈಪುಣ್ಯತೆಯನ್ನು ಬಳಸಿಕೊಳ್ಳಬೇಕು. ಉದ್ಯಮಶೀಲತೆ, ನಾವೀನ್ಯತೆ ಚಿಂತನೆಯನ್ನು ಮೂಡಿಸುವ ಉದ್ದೇಶದಿಂದ ಕಾರ್ಯಾಗಾರವನ್ನು ವಿವಿಯಲ್ಲಿ ಆಯೋಜಿಸಿದ್ದೇವೆ. ಮುಂಬರುವ ದಿನಗಳಲ್ಲಿ ಉದ್ಯೋಗ ಭರವಸೆ ಕೋಶದ ಮೂಲಕ ವಿದ್ಯಾರ್ಥಿಗಳಿಗೆ ಪ್ಲೇಸ್‍ಮೆಂಟ್ ದೊರಕಿಸುವ ಕಾರ್ಯ ಆಗಲಿದೆ ಎಂದು ಹೇಳಿದರು.
ವಿಎಸ್‍ಕೆಯುನ ಕುಲಪತಿಗಳಾದ ಪ್ರೊ ಎಂ. ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಇಂಡಿಯಾ4ಐಎಎಸ್ ಸಂಸ್ಥೆಯ ಸಿಬ್ಬಂದಿ ನಾಗರಾಜು, ವಿವಿಯ ಉದ್ಯೋಗ ಕೋಶದ ಸಂಯೋಜಕರಾದ ಡಾ ಸುನೀಲ್ ಉಪಸ್ಥಿತರಿದ್ದರು.
ಎರಡು ದಿನಗಳ ಕಾರ್ಯಾಗಾರದಲ್ಲಿ ವಿವಿಯ ಪ್ರಾಧ್ಯಾಪಕರುಗಳು, ಕಾಲೇಜುಗಳ ಉಪನ್ಯಾಸಕರುಗಳು ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್