ಕೊಪ್ಪಳ : ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಸ್ಪರ್ಧೆ
ಅಂತಾರಾಷ್ಟ್ರೀಯ ಕಚೇರಿ
ಕೊಪ್ಪಳ : ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಸ್ಪರ್ಧೆ


ಕೊಪ್ಪಳ, 11 ಡಿಸೆಂಬರ್ (ಹಿ.ಸ.)

ಆ್ಯಂಕರ್ : ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026 ಪ್ರಯುಕ್ತ ಕೃಷಿ ಇಲಾಖೆಯಿಂದ ಡಿಸೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲ್ಲೂಕು ಪಂಚಾಯತ ಆವರಣದಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಡಿಸೆಂಬರ್ 18 ರ ಒಳಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾ ಆಡಳಿತ ಭವನ, ಕೊಪ್ಪಳ ಕಛೇರಿಗೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ಕಳುಹಿಸಬೇಕು.

2024-25 ನೇ ಸಾಲಿನಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಜ್ಯ ಮಟ್ಟದಲ್ಲಿ ಮೊದಲನೇ, ದ್ವಿತೀಯ, ತೃತೀಯ ಬಹುಮಾನ ಪಡೆದ ಸ್ಪರ್ಧೆಗಳಿಗೆ ಪ್ರಸ್ತುತ ಸಾಲಿನಲ್ಲಿ ಅವಕಾಶವಿರುವುದಿಲ್ಲ. ಪ್ರತಿ ಸ್ಪರ್ಧಿಗಳಿಗೆ ಒಂದೇ ತಿನಿಸು, ಅಡುಗೆ (ಸಸ್ಯಹಾರಿ ತಿನಿಸು/ಅಡುಗೆ ಮಾತ್ರ), ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳ ತಿನಿಸು, ಅಡುಗೆ ಮಾಡಲು ಅವಕಾಶವಿರುತ್ತದೆ. ಸ್ಪರ್ಧಿಗಳು ತಮ್ಮ ಅರ್ಜಿಯಲ್ಲಿ ನಮೂದಿಸಿದ ಸಿರಿಧಾನ್ಯ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಡಿಸೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾಲೂಕ ಪಂಚಾಯತ್ ಆವರಣದಲ್ಲಿ ಪ್ರದರ್ಶಿಸಬೇಕು.

ತಯಾರಿಸಿದ ತಿನಿಸು, ಅಡುಗೆಯ ಪ್ರದರ್ಶನ ತಯಾರಿಕೆಗೆ ಬಳಸಿದ ಪದಾರ್ಥಗಳು, ತೋರಿಕೆ, ರುಚಿ, ಸುವಾಸನೆ, ಪೌಷ್ಠಿಕತೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಜಿಲ್ಲಾ ಮಟ್ಟಕ್ಕೆ ಅತ್ಯುತ್ತಮ ಒಂದು ಸಿಹಿ, ಖಾರ (ಸಿರಿಧಾನ್ಯ ಖಾದ್ಯಗಳು ಮಾತ್ರ) ಮತ್ತು ಮರೆತು ಹೋದ ಖಾದ್ಯದ ತಿನಿಸನ್ನು ಅಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಮೊದಲನೇ, ದ್ವಿತೀಯ, ತೃತೀಯ ಬಹುಮಾನ ಸಿಹಿ, ಖಾರ (ಸಿರಿಧಾನ್ಯ) ಖಾದ್ಯಗಳು ಮಾತ್ರ), ಮರೆತು ಹೋದ ಖಾದ್ಯದ ತಿನಿಸಿಗೆ ತಲಾ ರೂ.5000/-, ರೂ.3000/-, ರೂ.2000/- ಗಳನ್ನು ನೀಡಲಾಗುವುದು.

ರಾಜ್ಯ ಮಟ್ಟದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗುವುದು. ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತರು, ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳೊಂದಿಗೆ ಖಾದ್ಯವನ್ನು ಅಲ್ಲಿಯೇ ಸ್ವತಃ ತಯಾರಿಸಲು ಸಿದ್ಧರಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ) ಶಶಿಕಲಾ ಸವಣೂರ, ಮೊ.ಸಂ: 9611709089 ಹಾಗೂ ಕೃಷಿ ಅಧಿಕಾರಿ ತಾಂತ್ರಿಕ (2) ಪ್ರಕಾಶ ಚವಡಿ: 8317319327 ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande