
ವಿಜಯಪುರ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು, 2025-26ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ, ನಂತರ ಸಾಂಕೇತಿಕವಾಗಿ ಧ್ವಜ ಸ್ವೀಕರಿಸಿ, ದೇಣಿಗೆ ನೀಡುವುದರ ಮೂಲಕ ಸಾರ್ವಜನಿಕರಿಗೆ ಧ್ವಜಗಳನ್ನು ಮಾರಾಟ ಮಾಡಿ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಧ್ವಜ ನಿಧಿ ಸಂಗ್ರಹದ ಈ ನಿಧಿಯನ್ನು ಯುದ್ಧ ಸಂತ್ರಸ್ತರಿಗೆ,ಮಾಜಿ ಸೈನಿಕರು ಅವರ ಅವಲಂಬಿತರ ಸಲುವಾಗಿ ಹಮ್ಮಿಕೊಂಡ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ. ಸಾರ್ವಜನಿಕರು ಧ್ವಜ ಖರೀದಿಸುವ ಮೂಲಕ ದೇಶದ ಸೈನಿಕರಿಗೆ ಬೆಂಬಲಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯು 2025ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ನಿಗದಿಪಡಿಸಲಾದ ಗುರಿ ಸಾಧಿಸಿರುವುದರಿಂದ ಈ ನಿಧಿಯು ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಅಮೂಲ್ಯ ನೆರವು ನೀಡಲಿದ್ದು, ಜಿಲ್ಲೆಯ ಈ ಕೊಡುಗೆಯನ್ನು ಪ್ರಶಂಸಿಸುವ ಉದ್ದೇಶದಿಂದ ಜಿಲ್ಲೆಗೆ ಪ್ರಶಸ್ತಿ ಸಂದಿರುವುದು ಹೆಮ್ಮೆ ಮೂಡಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರೂ ಆದ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಉಪ ನಿರ್ದೇಶಕ ವಿನಕುಮಾರ ಪಾಟೀಲ ಸೇರಿದಂತೆ, ಮಾಜಿ ಸೈನಿಕರು, ಇಲಾಖಾ ಅಧಿಕಾರಿ, ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande