
ರಾಯಚೂರು, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಹೆಚ್ಚಿನ ಜನಸಂಪರ್ಕ ಹೊಂದಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಮೊದಲ ಆದ್ಯತೆ ಮೂಲಕ ಅನುದಾನ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಚರಂಡಿ ರಸ್ತೆ ಸುಧಾರಣೆ ಸೇರಿದಂತೆ ಜನರ ಬೇಡಿಕೆಗೆ ಅನುಗುಣವಾಗಿ ನಿರಂತರ ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರಾದ ಎನ್ ಎಸ್ ಬೋಸರಾಜು ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿರವಾರ ತಾಲೂಕಿನ ಅತ್ತನೂರು ದಿಂದ ಬೊಮ್ಮನಾಳ ಗ್ರಾಮ ಸಂಪರ್ಕಿಸುವ ಮುಧೋಳ ಯರಗೇರಾ ರಾಜ್ಯ ಹೆದ್ದಾರಿ 127 ರ ಕಿಮಿ 146 ರಿಂದ 161 ರವರೆಗೆ ಅಪೆಂಡಿಕ್ಸ್ ಯೋಜನೆ ಅಡಿಯಲ್ಲಿ 2 ಕೋಟಿ ವೆಚ್ಚದ ಡಾಂಬರಿಕರಣ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅನೇಕ ಜನಪರ ಯೋಜನೆಗಳೊಂದಿಗೆ ಗ್ರಾಮೀಣ ಭಾಗದ ಸರ್ವಾಂಗಿಣ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಶೈಕ್ಷಣಿಕ ಹಾಗೂ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳ ಇತ್ಯರ್ಥಕ್ಕಾಗಿ ಇನ್ನು ಹೆಚ್ಚಿನ ಅನುದಾನವನ್ನು ಹಂತ ಹಂತವಾಗಿ ನೀಡಲಾಗುವುದು ಸಾರ್ವಜನಿಕರು ಅಭಿವೃದ್ಧಿ ಕಾಮಗಾರಿಗಳ ಕೆಲಸಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ನಂತರ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಮಾತನಾಡಿ, ಭೂಮಿ ಪೂಜೆ ನೆರವೇರಿಸಿದ ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಉತ್ತಮ ಗುಣಮಟ್ಟದೊಂದಿಗೆ ಶೀಘ್ರ ಕಾಮಗಾರಿ ಕೆಲಸ ಪ್ರಾರಂಭಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ತಾಲೂಕ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಬ್ದುಲ್ ಗಪೂರು ಸಾಬ್, ಮುಖಂಡರಾದ ಶರಣಯ್ಯ ನಾಯಕ್, ಚುಕ್ಕಿ ಶಿವಕುಮಾರ್, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಬಸವರಾಜ ಪಾಟೀಲ್ ಅತ್ತನೂರು, ಡಾ. ಯಂಕನಗೌಡ, ಭದ್ರಿ ಸ್ವಾಮಿ ಸೇರಿದಂತೆ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್