
ಇಸ್ತಾನ್‌ಬುಲ್, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಶಾಂತಿ ಮಾತುಕತೆಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಡರಾತ್ರಿ ಘೋಷಿಸಿದರು. ಮುಂದಿನ ಸುತ್ತಿನ ಮಾತುಕತೆ ಯಾವಾಗ ನಡೆಯಲಿದೆ ಎಂಬುದು ಇದೀಗ ಅನಿಶ್ಚಿತವಾಗಿದೆ.
ಇಸ್ತಾನ್‌ಬುಲ್‌ನಲ್ಲಿ ಗುರುವಾರ ಆರಂಭವಾದ ಮೂರನೇ ಸುತ್ತಿನ ಮಾತುಕತೆಗಳು ಎರಡು ದಿನಗಳ ಕಾಲ ನಡೆಯಬೇಕಾಗಿದ್ದರೂ, ಶನಿವಾರಕ್ಕೆ ಮುನ್ನವೇ ಅವು ಕೊನೆಗೊಂಡಿವೆ. ಸಂಧಾನಕಾರರು ಇಬ್ಬರನ್ನೂ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದು, ಭಿನ್ನಾಭಿಪ್ರಾಯಗಳು ಬಗೆಹರಿಯದೆ ಉಳಿದಿವೆ.
ಆಸಿಫ್ ಅವರು ಪಾಕಿಸ್ತಾನದ ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಾವು ಮಾತನಾಡುತ್ತಿರುವ ಈ ಕ್ಷಣದಲ್ಲೇ ಮಾತುಕತೆಗಳು ಕೊನೆಗೊಂಡಿವೆ” ಎಂದು ಹೇಳಿದರು. ಇದಕ್ಕೂ ಮೊದಲು, ಹಿರಿಯ ಭದ್ರತಾ ಮೂಲವೊಂದು ಡಾನ್ ಪತ್ರಿಕೆಗೆ “ಇಸ್ತಾನ್‌ಬುಲ್‌ನಲ್ಲಿ ಮಾತುಕತೆಗಳು ಸ್ಥಗಿತಗೊಂಡಿವೆ” ಎಂದು ದೃಢಪಡಿಸಿತ್ತು.
ಮಾತುಕತೆಗಳಲ್ಲಿ ಅಫ್ಘಾನ್ ತಾಲಿಬಾನ್ ಪ್ರತಿನಿಧಿಗಳು ಯಾವುದೇ ಲಿಖಿತ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದು, ಕೇವಲ ಮೌಖಿಕ ಒಪ್ಪಂದಕ್ಕೆ ಒತ್ತಾಯಿಸಿದರೆಂದು ಆಸಿಫ್ ತಿಳಿಸಿದ್ದಾರೆ. “ಇಸ್ತಾನ್‌ಬುಲ್‌ನಿಂದ ಖಾಲಿಹಸ್ತವಾಗಿ ಹಿಂದಿರುಗುವುದು ನೋವುಂಟುಮಾಡುತ್ತದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಆಸಿಫ್ ಸ್ಪಷ್ಟಪಡಿಸಿರುವಂತೆ, ಪ್ರಸ್ತುತ ಕದನ ವಿರಾಮ ಜಾರಿಯಲ್ಲಿದೆ. “ಅಫ್ಘಾನಿಸ್ತಾನ ಅದನ್ನು ಉಲ್ಲಂಘಿಸಿದರೆ ಪಾಕಿಸ್ತಾನ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ,” ಎಂದಿದ್ದಾರೆ. ಪಾಕಿಸ್ತಾನದ ಪ್ರಮುಖ ಬೇಡಿಕೆಯಾದ “ಅಫ್ಘಾನ್ ನೆಲದಿಂದ ನಡೆಯುವ ಉಗ್ರ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು” ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.
ಈ ಮಾತುಕತೆಯಲ್ಲಿ ಪಾಕಿಸ್ತಾನಿ ನಿಯೋಗವನ್ನು ಐಎಸ್‌ಐ ಮಹಾನಿರ್ದೇಶಕ ಲೆ.ಜೆ. ಅಸಿಮ್ ಮಲಿಕ್ ನೇತೃತ್ವವಹಿಸಿದ್ದರು. ಅವರೊಂದಿಗೆ ಹಿರಿಯ ಮಿಲಿಟರಿ ಹಾಗೂ ವಿದೇಶಾಂಗ ಅಧಿಕಾರಿಗಳಿದ್ದರು. ಅಫ್ಘಾನ್ ತಾಲಿಬಾನ್ ಪರವಾಗಿ ಜಿಡಿಐ ಮುಖ್ಯಸ್ಥ ಅಬ್ದುಲ್ ಹಕ್ ವಾಸೆಕ್, ಸುಹೇಲ್ ಶಾಹೀನ್, ಅನಸ್ ಹಕ್ಕಾನಿ, ಮತ್ತು ಉಪ ಆಂತರಿಕ ಸಚಿವ ರಹಮತುಲ್ಲಾ ನಜೀಬ್ ಭಾಗವಹಿಸಿದ್ದರು.
ಅಕ್ಟೋಬರ್‌ನಲ್ಲಿ ಗಡಿ ಘರ್ಷಣೆಗಳ ನಂತರ ದೋಹಾದಲ್ಲಿ ಮೊದಲ ಹಾಗೂ ಎರಡನೇ ಸುತ್ತಿನ ಮಾತುಕತೆಗಳು ನಡೆದಿದ್ದವು. ಇಸ್ತಾನ್‌ಬುಲ್ ಸುತ್ತು ಮಾತುಕತೆಗಳಲ್ಲಿ ಮೇಲ್ವಿಚಾರಣಾ ವಿಧಾನವನ್ನು ಅಂತಿಮಗೊಳಿಸುವ ಉದ್ದೇಶವಿತ್ತು. ಆದರೆ ಗುರುವಾರ ನಡೆದ ಮುಖಾಮುಖಿ ಸಭೆಯ ನಂತರ ಶನಿವಾರದೊಳಗೆ ಯಾವುದೇ ನೇರ ಚರ್ಚೆ ನಡೆಯಲಿಲ್ಲ.
ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಹುಸೇನ್ ಅಂದ್ರಾಬಿ ಇಸ್ಲಾಮಾಬಾದ್‌ನಲ್ಲಿ ಪತ್ರಕರ್ತರಿಗೆ ಮಾತನಾಡಿ, “ನಮ್ಮ ನಿಯೋಗವು ಸಾಕ್ಷ್ಯಾಧಾರಗಳೊಂದಿಗೆ ತನ್ನ ಪ್ರಸ್ತಾಪವನ್ನು ಮಂಡಿಸಿದೆ,” ಎಂದರು. ಆದರೆ ಅಫ್ಘಾನ್ ಸಂಧಾನಕಾರರು ಪಾಕಿಸ್ತಾನದ ಬೇಡಿಕೆಗಳನ್ನು “ಅವಾಸ್ತವಿಕ ಹಾಗೂ ಆಕ್ರಮಣಕಾರಿ” ಎಂದು ವಿಶ್ಲೇಷಿಸಿದರು.
ಅಫ್ಘಾನ್ ಮೂಲಗಳ ಪ್ರಕಾರ, ಪಾಕಿಸ್ತಾನವು ಟಿಟಿಪಿ (ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ್) ಸದಸ್ಯರನ್ನು ಅಫ್ಘಾನಿಸ್ತಾನಕ್ಕೆ ವರ್ಗಾಯಿಸುವ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಅಫ್ಘಾನ್ ತಾಲಿಬಾನ್ ಸರ್ಕಾರವು, “ಪಾಕಿಸ್ತಾನವು ತನ್ನ ಭೂಮಿ ಮತ್ತು ವಾಯುಪ್ರದೇಶವನ್ನು ಇತರ ದೇಶಗಳ ವಿರುದ್ಧದ ಕಾರ್ಯಾಚರಣೆಗೆ ಬಳಸಬಾರದು” ಎಂದು ಆಗ್ರಹಿಸಿದೆ.
ರಾಜಕೀಯ ವಿಶ್ಲೇಷಕ ಅಜೀಜ್ ಮರೀಜ್ ಅಭಿಪ್ರಾಯಪಟ್ಟಂತೆ, “ಟಿಟಿಪಿ ವಿಷಯ ಪಾಕಿಸ್ತಾನದ ಆಂತರಿಕ ಸಮಸ್ಯೆಯಾಗಿದ್ದು, ಅದನ್ನು ಅಫ್ಘಾನಿಸ್ತಾನಕ್ಕೆ ಎಳೆದು ತರುವುದು ಸೂಕ್ತವಲ್ಲ,” ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa